ಕೊಡ್ಲಿಪೇಟೆ, ಜೂ. ೧೬: ಸಮೀಪದ ಕಲ್ಲಾರೆ ಗ್ರಾಮದಲ್ಲಿ ನಿರ್ಗತಿಕರಾಗಿದ್ದ ವೃದ್ಧೆ ಕೃಷ್ಣಮ್ಮ ಅವರನ್ನು ಮಡಿಕೇರಿಯ ತನಲ್ ಆಶ್ರಮಕ್ಕೆ ಸೇರಿಸುವ ಮೂಲಕ ಸಮಾಜಸೇವಕರ ತಂಡ ಮಾನವೀಯತೆ ಮೆರೆದಿದೆ.

೭೦ರ ಪ್ರಾಯದ ಕೃಷ್ಣಮ್ಮ ಅವರು ನಿರ್ಗತಿಕರಾಗಿದ್ದು, ಕೂಲಿ ಕೆಲಸ ಮಾಡಲೂ ಅಶಕ್ತರಾಗಿದ್ದರು. ಅವರಿವರ ಮನೆಯಲ್ಲಿ ಕೇಳಿ ತಿನ್ನುತ್ತಿದ್ದ ಈ ವೃದ್ಧೆ ಬಸ್ ನಿಲ್ದಾಣದಲ್ಲಿ ತಂಗುತ್ತಿದ್ದರು. ಇದನ್ನು ಗಮನಿಸಿದ ಕುಶಾಲನಗರದ ರಾಫಿ ಎಂಬವರು, ಸ್ಥಳೀಯ ಗ್ರಾಪಂ. ಸದಸ್ಯರ ಗಮನಕ್ಕೆ ತಂದು ವೃದ್ಧೆಗೆ ಆಶ್ರಯ ನೀಡಲು ಕೈಜೋಡಿಸುವಂತೆ ಮನವಿ ಮಾಡಿದ್ದರು.

ಬೆಂಗಳೂರಿನಲ್ಲಿರುವ ಮಗ ಹಾಗೂ ಕೆಲ ಸಂಬAಧಿಕರು ವೃದ್ಧೆಯ ಪಾಲನೆಯಿಂದ ದೂರ ಉಳಿದ ಹಿನ್ನೆಲೆ ಕೃಷ್ಣಮ್ಮ ಅವರು ನಿರ್ಗತಿಕರಾಗಿ ಅಲೆಯುತ್ತಿದ್ದರು. ಈ ಬಗ್ಗೆ ರಾಫಿ ಅವರು, ಸ್ಥಳೀಯ ಗ್ರಾ.ಪಂ. ಸದಸ್ಯರುಗಳಾದ ವಹಾಬ್ ಕೊಡ್ಲಿಪೇಟೆ ಹಾಗೂ ಹನೀಫ್ ಬ್ಯಾಡಗೊಟ್ಟ ಅವರಿಗೆ ಮಾಹಿತಿ ನೀಡಿದ್ದರು. ಇವರೊಂದಿಗೆ ಕೈ ಜೋಡಿಸಿದ ಸಮಾಜಸೇವಕ ಶುಂಠಿ ಆಸಿಫ್ ಮತ್ತು ತಂಡದ ಸದಸ್ಯರು, ವೃದ್ಧೆ ಕೃಷ್ಣಮ್ಮ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಪರಿಚಯಸ್ಥರ ಮನೆಗೆ ಕರೆದೊಯ್ದು ಸ್ಥಳೀಯರ ಸಹಕಾರದಿಂದ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಕೊರೊನಾ ಪರೀಕ್ಷೆ ನಡೆಸಲಾಯಿತು. ಪ್ರಯೋಗಾಲಯದ ನಾಗರಾಜು, ಕೊಡ್ಲಿಪೇಟೆ ಗ್ರಾ.ಪಂ. ಪಿ.ಡಿ.ಓ. ಹರೀಶ್, ಉಪ ಠಾಣೆಯ ಪೊಲೀಸ್‌ಪೇದೆ ಡಿಂಪಲ್, ಬ್ಯಾಡಗೊಟ್ಟ ಗ್ರಾ.ಪಂ.ಸದಸ್ಯ ಹನೀಫ್ ಅವರುಗಳು ವೃದ್ಧೆಯನ್ನು ಕರೆದೊಯ್ಯಲು ಸಹಕರಿಸಿದರು. ಆಸಿಫ್ ಹಾಗೂ ಆಂಬ್ಯುಲೆನ್ಸ್ ಚಾಲಕ ನೌಫಲ್ ಅವರುಗಳು ವೃದ್ಧೆಯನ್ನು ಮಡಿಕೇರಿಯ ತನಲ್ ಕೂರ್ಗ್ ಆಶ್ರಮಕ್ಕೆ ಕರೆದೊಯ್ದರು. ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿರುವ ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಉಪಾಧ್ಯಕ್ಷೆ ಗೀತಾ ತ್ಯಾಗರಾಜ್ ಅವರುಗಳು, ಆಂಬ್ಯುಲೆನ್ಸ್ನ ಬಾಡಿಗೆ ಹಣವನ್ನು ಗ್ರಾ.ಪಂ. ನಿಂದ ಭರಿಸುವುದಾಗಿ ತಿಳಿಸಿದರು. ಒಟ್ಟಾರೆ ನಿರ್ಗತಿಕರಾಗಿ ಅಲೆಯುತ್ತಿದ್ದ ವೃದ್ಧೆ ಕೃಷ್ಣಮ್ಮ ಅವರ ಮೇಲೆ ಮಾನವೀಯತೆ ತೋರಿದ ತಂಡ, ಅವರನ್ನು ಆಶ್ರಮಕ್ಕೆ ಸೇರಿಸುವ ಮೂಲಕ ಮುಂದಿನ ದಿನಗಳಿಗೆ ನೆಲೆ ಒದಗಿಸುವಲ್ಲಿ ಯಶಸ್ವಿಯಾಯಿತು.