ಸೋಮವಾರಪೇಟೆ,ಜೂ.೧೬: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು-ಕಿರಗಂದೂರು ಗ್ರಾಮದ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾಡಾನೆಯೊಂದು ಸಾರ್ವಜನಿಕರ ಗದ್ದಲದಿಂದ ಬೆದರಿ ಚೋರನಹೊಳೆ ಮೂಲಕ ಕಾಫಿ ತೋಟಕ್ಕೆ ತೆರಳಿದ ಘಟನೆ ಇಂದು ಮಧ್ಯಾಹ್ನ ನಡೆಯಿತು.

ಐಗೂರು ವ್ಯಾಪ್ತಿಯಲ್ಲಿ ಈ ಹಿಂದಿನಿAದಲೂ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಈ ಭಾಗದಲ್ಲಿರುವ ಅರಣ್ಯ, ಟಾಟಾ ಕಾಫಿ ಎಸ್ಟೇಟ್‌ಗಳಲ್ಲಿ ಬೀಡುಬಿಡುವ ಕಾಡಾನೆಗಳು, ಕೃಷಿ ಫಸಲನ್ನು ನಷ್ಟಗೊಳಿಸುತ್ತಲೇ ಇವೆ. ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಮಾತ್ರ ರಸ್ತೆ ದಾಟುತ್ತಿದ್ದ ಕಾಡಾನೆಗಳು ಇದೀಗ ಹಗಲಿನ ವೇಳೆಯಲ್ಲೇ ಪ್ರತ್ಯಕ್ಷವಾಗುತ್ತಿದ್ದು, ಈ ವ್ಯಾಪ್ತಿಯ ಸಾರ್ವಜನಿಕರಲ್ಲಿ ಭಯಾತಂಕ ಉಂಟು ಮಾಡಿದೆ.

ಇಂದು ಮಧ್ಯಾಹ್ನ ಟಾಟಾ ಕಾಫಿ ಎಸ್ಟೇಟ್‌ನಿಂದ ಬಂದ ಕಾಡಾನೆಯೊಂದು ಐಗೂರು-ಕಿರಗಂದೂರು ಮುಖ್ಯರಸ್ತೆಯಲ್ಲೇ ನಿಂತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಜೋರಾಗಿ ಕೂಗಿದ್ದರಿಂದ ಬೆದರಿದ ಆನೆ, ಸಮೀಪದ ಚೋರನ ಹೊಳೆಗೆ ಇಳಿದು ಕೆಲಕಾಲ ಓಡಾಡಿ ನಂತರ ಅತ್ತಲಿನ ಎಸ್ಟೇಟ್‌ಗೆ ತೆರಳಿತು. ಹಗಲಿನ ವೇಳೆಯಲ್ಲೇ ಕಾಡಾನೆಗಳು ಓಡಾಡುತ್ತಿರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ತೆರಳಲೂ ಭಯಪಡುವಂತಾಗಿದೆ. ಕಾಫಿ ತೋಟಗಳಲ್ಲೂ ಕೆಲಸ ನಿರ್ವಹಿಸಲು ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.