ಕುಶಾಲನಗರ,ಜೂ.೧೪: ಕುಶಾಲನಗರ ಸಮೀಪ ಕೊಪ್ಪ ಗ್ರಾಮ ಹೆದ್ದಾರಿ ಬಳಿ ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿಸುತ್ತಿರುವ ಬಗ್ಗೆ ಸುತ್ತ ಮುತ್ತಲ ಗ್ರಾಮಗಳ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಕೆಲಸ ಸ್ಥಗಿತಗೊಳಿಸಲು ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಕೊಪ್ಪ ಆವರ್ತಿ ರಸ್ತೆ ತಿರುವಿನಲ್ಲಿರುವ ಸುಮಾರು ೧೫ ಎಕರೆ ವ್ಯಾಪ್ತಿಯ ಪ್ರದೇಶಕ್ಕೆ ವ್ಯಕ್ತಿಯೊಬ್ಬರು ಮಣ್ಣು ಸುರಿಯುತ್ತಿದ್ದು, ಇದರಿಂದ ಮಳೆಗಾಲದಲ್ಲಿ ಹಲವು ಗ್ರಾಮಗಳು ಮುಳುಗಡೆಯಾಗಲಿವೆ ಎಂದು ಕೊಪ್ಪ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕೆಲಸ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.

ಕಳೆದ ೩ ವರ್ಷಗಳಿಂದ ಮಳೆಗಾಲ ಅವಧಿಯಲ್ಲಿ ಈ ಪ್ರದೇಶಗಳು ಸಂಪೂರ್ಣ ನೀರಿನಲ್ಲಿ ಮುಳುಗುತ್ತಿದ್ದು ಜನಜೀವನ ಏರುಪೇರಾಗುತ್ತಿದೆ. ಕೂಡಲೇ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಈ ಭಾಗದ ನಿವಾಸಿಗಳು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.