ಸೋಮವಾರಪೇಟೆ,ಜೂ.೧೪: ಸೋಮವಾರಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಕೋವಿಡ್ ಕೇರ್ ಸೆಂಟರ್‌ನ್ನು ಖಾಸಗಿ ಸಂಸ್ಥೆಗೆ ವಹಿಸುವ ಪ್ರಸ್ತಾವನೆಗೆ ಈಗಾಗಲೇ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಆಸ್ಪತ್ರೆಯ ವೈದ್ಯರೊಂದಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸಭೆ ನಡೆಸಿದರು.

ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಸ್ಪತ್ರೆಯ ವೈದ್ಯರುಗಳು, ಈಗಿರುವ ಕೋವಿಡ್ ಕೇರ್ ಸೆಂಟರ್‌ನ ಸ್ಥಿತಿಗತಿಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ರೋಗಿಗಳಿಗೆ ಉತ್ತಮ ಸೇವೆ ಲಭಿಸುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಫಿಜಿಷಿಯನ್ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅತೀ ಹೆಚ್ಚು ಕೊರೊನಾ ರೋಗಿಗಳು ಇದ್ದ ಸಂದರ್ಭವೂ ಸ್ಥಳೀಯ ವೈದ್ಯರು, ಸಿಬ್ಬಂದಿಗಳೇ ಆರೈಕೆ ಮಾಡಿದ್ದಾರೆ. ಈ ಹಿನ್ನೆಲೆ ಸದ್ಯದ ಮಟ್ಟಿಗೆ ಖಾಸಗಿ ಸಂಸ್ಥೆಗೆ ವಹಿಸುವ ಅವಶ್ಯಕತೆಯಿಲ್ಲ ಎಂದು ವೈದ್ಯಾಧಿಕಾರಿ ರವೀಂದ್ರ, ವೈದ್ಯರಾದ ಸತೀಶ್‌ಕುಮಾರ್, ಶಿವಪ್ರಸಾದ್ ಸೇರಿದಂತೆ ಇತರರು ತಿಳಿಸಿದರು.

ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ. ಫಿಜಿಷಿಯನ್ ಕರ್ತವ್ಯದಲ್ಲಿದ್ದು, ಅನಸ್ತೇಷಿಯಾ ತಜ್ಞರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ಒದಗಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆ ಸರ್ಕಾರೇತರ ಸಂಸ್ಥೆಗೆ ವಹಿಸುವ ಅಗತ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.

ಆದರೂ ಸಂಬAಧಿಸಿದ ಸಂಸ್ಥೆಯ ಪ್ರತಿನಿಧಿಗಳನ್ನು ಕರೆಸಿ ಅವರ ಸಂಸ್ಥೆಯಲ್ಲಿರುವ ವೈದ್ಯರು, ದಾದಿಯರು, ಉಪಕರಣಗಳು, ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.