ಸೋಮವಾರಪೇಟೆ, ಜೂ. ೧೪: ಮನೆಯಿಂದ ಬೈಕ್ನಲ್ಲಿ ಪಟ್ಟಣಕ್ಕೆ ಆಗಮಿಸುತ್ತಿದ್ದ ಕೃಷಿಕರೋರ್ವರ ಮೇಲೆ ಕಾಡಾನೆ ಧಾಳಿ ನಡೆಸಿದ ಪರಿಣಾಮ, ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕಾಟ್ನಮನೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಕುಸೂಬೂರು ಗ್ರಾಮದ ಕಾಟ್ನಮನೆ ಗಿರೀಶ್ ಗಾಯಗೊಂಡ ಕೃಷಿಕ. ಸೋಮವಾರಪೇಟೆ ಪಟ್ಟಣಕ್ಕೆ ಸಾಮಗ್ರಿಗಳನ್ನು ಖರೀದಿ ಮಾಡಲು ಬೆಳಿಗ್ಗೆ ೯ ಗಂಟೆ ಸುಮಾರಿಗೆ ಬೈಕ್ನಲ್ಲಿ ಆಗಮಿಸುತ್ತಿದ್ದ ಸಂದರ್ಭ, ಗ್ರಾಮದ ರಸ್ತೆಯಲ್ಲಿ ಒಂಟಿ ಸಲಗ ಎದುರಾಗಿ ಬೈಕ್ನ ಮೇಲೆ ಧಾಳಿ ನಡೆಸಿದೆ.
ಈ ಸಂದರ್ಭ ಬೈಕ್ ಸಹಿತ ಕೆಳಬಿದ್ದ ಗಿರೀಶ್ ಅವರ ಮೇಲೆ ಕಾಲಿನಿಂದ ತುಳಿಯಲು ಪ್ರಯತ್ನಿಸಿದ್ದು, ತಕ್ಷಣ ಗಿರೀಶ್ ಅವರು ಕಿರುಚಿ ಪಕ್ಕಕ್ಕೆ ಹೊರಳಿದ್ದಾರೆ. ಕಿರುಚಾಟಕ್ಕೆ ಬೆದರಿದ ಕಾಡಾನೆ ತೋಟದೊಳಗೆ ತೆರಳಿದೆ. ಸ್ಥಳೀಯರು ಗಾಯಾಳುವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಗಾಯಾಳು ಗಿರೀಶ್ ಅವರ ಸೊಂಟ ಹಾಗೂ ಹೊಟ್ಟೆ ಭಾಗಕ್ಕೆ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಕೃಷಿ ಫಸಲು ನಷ್ಟಗೊಳಿಸುವುದು ಮಾಮೂಲಾಗಿದೆ. ಇದೀಗ ಮನುಷ್ಯರ ಮೇಲೂ ಧಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಡವನಾಡು ಮೀಸಲು ಅರಣ್ಯದಿಂದ ಬರುವ ಕಾಡಾನೆಗಳ ಹಿಂಡು, ಕೃಷಿ ಫಸಲನ್ನು ಹಾನಿ ಮಾಡುತ್ತಿವೆ. ಕುಸುಬೂರು, ಕಾರೆಕೊಪ್ಪ, ಬೇಳೂರು, ಕೆಂಚಮ್ಮನಬಾಣೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ಹಾವಳಿ ಮಾಡುತ್ತಿವೆ ಎಂದು ಕುಸೂಬೂರು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ರಸ್ತೆಯಲ್ಲಿ ಸಂಚರಿಸಲೂ ಭಯವಾಗುತ್ತಿದೆ. ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಕಾರ್ಮಿಕರು ಬರುತ್ತಿಲ್ಲ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.