*ಗೋಣಿಕೊಪ್ಪ, ಜೂ. ೧೪: ತಿತಿಮತಿ ಮರೂರು ಗಿರಿಜನ ಆಶ್ರಮ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೆ ಶಾಸಕ ಕೆ.ಜಿ. ಬೋಪಯ್ಯ ಅವರು ತಾಲೂಕು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೊರೊನಾ ಬಾಧಿತರಿಗೆ ಆತ್ಮಸ್ಥೆöÊರ್ಯವನ್ನು ತುಂಬಿದರು.

ಯೋಗ ಮತ್ತು ಧ್ಯಾನದಿಂದ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಕೊರೊನಾ ಬಾಧೆಯಿಂದ ಹೊರಬರಲು ಪ್ರಯತ್ನಿಸಬೇಕು. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಪೌಷ್ಟಿಕ ಆಹಾರಗಳ ಸೇವನೆ, ವ್ಯಾಯಾಮಗಳಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿದೆ ಎಂದು ಆರೋಗ್ಯ ಕಾಪಾಡಿಕೊಳ್ಳುವ ಸಲಹೆಗಳನ್ನು ನೀಡಿದರು. ನಂತರ ಅಡುಗೆ ಕೋಣೆ, ದಿನಸಿ ಗೋದಾಮುಗಳಿಗೆ ಭೇಟಿ ನೀಡಿದ ಶಾಸಕರು ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ಬಾಧಿತರಿಗೆ ನೀಡಬೇಕು. ಪುಳಿಯೊಗರೆ, ಬಿಸಿಬೇಳೆ ಬಾತ್ ಇಂತಹ ಆಹಾರಗಳನ್ನು ನೀಡದೆ ಇಡ್ಲಿ, ದೋಸೆ, ಪಲಾವ್‌ಗಳಂತಹ ಆಹಾರವನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿಯೊಬ್ಬರಿಗೂ ಬಿಸಿನೀರಿನ ವ್ಯವಸ್ಥೆ ಸೇರಿದಂತೆ ಇತರ ಸೌಕರ್ಯಗಳನ್ನು ಒದಗಿಸಿಕೊಡಲು ಅಡುಗೆ ನಿರ್ವಹಣಾ ಸಿಬ್ಬಂದಿಗಳಿಗೆ ಆದೇಶಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷಿ÷್ಮ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಇವರುಗಳು ಶಾಸಕರೊಡನೆ ಹಾಜರಿದ್ದು, ಕೊರೊನಾ ಬಾಧಿತ ವ್ಯಕ್ತಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆತ್ಮಬಲವನ್ನು ತುಂಬಿದರು.

ಈ ಸಂದರ್ಭ ತಾಲೂಕು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಗೋಣಿಕೊಪ್ಪ ಪೊಲೀಸ್ ಉಪನಿರೀಕ್ಷಕ ಸುಬ್ಬಯ್ಯ, ತಿತಿಮತಿ ಗ್ರಾ.ಪಂ. ಉಪಾಧ್ಯಕ್ಷೆ ವಿಜಯ, ತಿತಿಮತಿ ಶಕ್ತಿ ಕೇಂದ್ರದ ಪ್ರಮುಖ್ ಎನ್.ಎನ್. ಅನೂಪ್‌ಕುಮಾರ್ ಹಾಜರಿದ್ದರು. -ಎನ್.ಎನ್. ದಿನೇಶ್