೨ನೇ ಅಲೆಯನ್ನು ಪ್ರಾರಂಭದಲ್ಲಿಯೇ ತಡೆಗಟ್ಟಲು ಎಲ್ಲರೂ ವಿಫಲರಾಗಿದ್ದೇವೆ. ಇದೀಗ ಮಳೆಗಾಲದೊಂದಿಗೆ ಮೂರನೇ ಅಲೆಯೂ ಬರುವ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಾರೆ. ಕೊರೊನಾ ಬಗ್ಗೆ ಹೆಚ್ಚಿನ ಜನರಿಗೆ ತಿಳುವಳಿಕೆ ಬರುತ್ತಿದೆ. ೨ನೇ ಅಲೆಯಲ್ಲಾದ ಪ್ರಮಾದಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿಪ್ರಾಯಿಸಿದ್ದಾರೆ.
‘ಸರ್ಕಾರದ ಮಾರ್ಗಸೂಚಿ ಅಳವಡಿಸಿಕೊಳ್ಳಲೇಬೇಕು. ಸದ್ಯ ೨ನೇ ಅಲೆ ಹತೋಟಿಗೆ ಬರುತ್ತಿದೆ. ಇದೇ ಸಂದರ್ಭ ಮಳೆಗಾಲವೂ ಬಂದಿದೆ. ೩ನೇ ಅಲೆಯ ಆತಂಕದ ನಡುವೆಯೂ ಕೊಡಗಿನ ಆಸ್ಪತ್ರೆಗಳು ಒಂದಿಷ್ಟು ಸುಧಾರಣೆ ಕಂಡಿದೆ. ಈಗಿರುವಷ್ಟು ಔಷಧಿ, ಆಕ್ಸಿಜನ್, ವೈದ್ಯಕೀಯ ಸಿಬ್ಬಂದಿ ಮೊದಲೇ ಇದ್ದಿದ್ದರೆ ೨ನೇ ಅಲೆಯಲ್ಲಾದ ಸಾವಿನ ಪ್ರಮಾಣ ತಡೆಯಬಹುದಿತ್ತು. ಕೆಲವು ಕಡೆ ಕೋವಿಡ್ ಸೆಂಟರ್ ಮಾಡಲಾಗಿದ್ದು, ಅಲ್ಲಿಯೂ ಆಕ್ಸಿಜನ್ ವ್ಯವಸ್ಥೆಯಾಗಬೇಕಿದೆ’
‘ವಿಶೇಷವಾಗಿ ನಾಪೋಕ್ಲು ವ್ಯಾಪ್ತಿಯಲ್ಲಿ ೪-೫ ಇಂಚು ಮಳೆಯಾದರೆ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆ. ದೊಡ್ಡ ಹೋಬಳಿಯಾಗಿರುವ ಹಿನ್ನೆಲೆ ನಾಪೋಕ್ಲಿನಲ್ಲಿ ಕೋವಿಡ್ ಕೇರ್ಸೆಂಟರ್ ಮಾಡಬೇಕು. ಈಗಾಗಲೇ ಸ್ಥಳೀಯ ಸಂಸ್ಥೆಯೊAದು ತಾನೇ ಕೇರ್ಸೆಂಟರ್ ಪ್ರಾರಂಭಿಸಲು ಮುಂದೆ ಬಂದಿದೆ. ಸರ್ಕಾರಿ ಕಟ್ಟಡಗಳೂ ಸಾಕಷ್ಟು ಇವೆ. ಮುನ್ನೆಚ್ಚರಿಕಾ ಕ್ರಮವಾಗಿ ಕೇರ್ ಸೆಂಟರ್ ಮಾಡಬೇಕಿದೆ. ಸರ್ಕಾರದಿಂದ ಯಾವದೇ ಸೌಲಭ್ಯ ಪಡೆಯದೇ ತಾವೇ ಸೆಂಟರ್ ತೆರೆಯುವದಾಗಿ ಸಂಸ್ಥೆ ಮುಂದೆ ಬಂದಿದ್ದು, ಇದಕ್ಕೆ ಸರ್ಕಾರ ಅವಕಾಶ ನೀಡಬೇಕು’
ಜಿಲ್ಲಾಸ್ಪತ್ರೆಯಲ್ಲಿ ಬಿ.ಪಿ., ಶುಗರ್ ಇದ್ದವರಿಗೆ ಕೋವಿಡ್ ಚಿಕಿತ್ಸೆ ಮಾತ್ರ ನೀಡಲಾಗುತ್ತಿತ್ತು. ಇದರಿಂದಾಗಿ ಹಲವಷ್ಟು ಸಾವುಗಳು ಸಂಭವಿಸಿವೆ. ಈ ವ್ಯವಸ್ಥೆ ಇದೀಗ ಸುಧಾರಣೆಯಾಗಿದೆ. ಆಸ್ಪತ್ರೆ ಒಳಗೆ, ಸಿ.ಸಿ. ಕ್ಯಾಮೆರಾ, ಐಸಿಯು ರೋಗಿಗಳಿಗೆ ಊಟ ಸಿಗದಿರುವ ಅವ್ಯವಸ್ಥೆಗಳನ್ನು ಸರಿಪಡಿಸಿದ್ದೇನೆ. ೨ನೇ ಅಲೆಯಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಮುಂದೆ ಇಂತಹ ಅಚಾತುರ್ಯ ಮರುಕಳಿಸಬಾರದು. ಮಳೆಗಾಲದ ಜೊತೆಗೆ ೩ನೇ ಅಲೆಯನ್ನು ಎದುರಿಸಲು ಸಿದ್ಧರಾಗಬೇಕು’
‘ಐಸಿಯು ಹಾಗೂ ವೆಂಟಿಲೇಟರ್ನಲ್ಲಿರುವ ರೋಗಿಗಳ ಬಗ್ಗೆ ಮನೆಯವರಿಗೆ ಹೆಚ್ಚಿನ ಆತಂಕ ಇರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳು ಹಾಗೂ ಸಂಬAಧಿಕರ ನಡುವೆ ವೀಡಿಯೋ ಕಾಲ್ ಮೂಲಕ ಮಾತುಕತೆ ನಡೆಸಲು ವ್ಯವಸ್ಥೆ ರೂಪಿಸಬೇಕು. ಹಾಗಾದಾಗ ಮನೆಯವರ ಆತಂಕ ದೂರವಾಗುತ್ತದೆ’
‘ಲಸಿಕೆ ನೀಡುವ ಸೆಂಟರ್ಗಳ ಸಂಖ್ಯೆ ಹೆಚ್ಚಿಸಬೇಕು. ಪ್ರತಿ ಗ್ರಾಮಕ್ಕೆ ತೆರಳಿ ಲಸಿಕೆ ನೀಡುವಂತಾಗಬೇಕು. ಪ್ರವಾಹ ಭೀತಿಯಿಂದ ನದಿಪಾತ್ರದ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ರವಾನಿಸಲು ಜಿಲ್ಲಾಡಳಿತ ಮುಂದಾಗುತ್ತದೆ. ಇದೀಗ ಕೊರೊನಾ ಇರುವುದರಿಂದ ಕಾಳಜಿ ಕೇಂದ್ರಗಳೇ ಕೊರೊನಾ ಕಾರ್ಖಾನೆಯಾಗಬಾರದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಬೇಕು’
‘ನಮ್ಮದು ಕೂಡುಕುಟುಂಬವಾಗಿದ್ದು, ಮನೆ ಮಂದಿಯ ಸಂಪೂರ್ಣ ಸಹಕಾರ ಇರುವುದರಿಂದ ಓಡಾಟಕ್ಕೆ ಯಾವುದೇ ಅಡಚಣೆಯಾಗಲಿಲ್ಲ. ಮಾರ್ಗಸೂಚಿಗಳನ್ನು ಪಾಲಿಸಿದರೆ ಸಮಸ್ಯೆಯಾಗುವುದಿಲ್ಲ ಎಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನನ್ನ ಸೊಸೆ ಸಲಹೆ ನೀಡುತ್ತಿದ್ದರು. ಜನಪ್ರತಿನಿಧಿಯಾಗಿ ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಕುಳಿತುಬಿಟ್ಟರೆ ಸಾರ್ವಜನಿಕರ ಸಮಸ್ಯೆ ಬಗೆಹರಿಸುವುದಾದರೂ ಹೇಗೆ? ಹೊರಗಡೆ ಹೋಗುವಾಗ ಅಗತ್ಯ ಮುಂಜಾಗ್ರತೆ ವಹಿಸುತ್ತಿದ್ದೇನೆ. ಮನೆಯ ಊಟವನ್ನೇ ಸೇವಿಸುತ್ತಿದ್ದೇನೆ. ಸಾಮಾಜಿಕ ಕಾರ್ಯಕ್ಕೆ ಪತಿ ಸಂಪೂರ್ಣ ಬೆಂಬಲ ನೀಡಿದ್ದಾರೆ’ ಎಂದು ವೀಣಾ ಅಚ್ಚಯ್ಯ ಪ್ರತಿಕ್ರಿಯಿಸಿದ್ದಾರೆ.