ಸೋಮವಾರಪೇಟೆ, ಜೂ. ೧೦: ಕೊರೊನಾ ಎರಡನೆ ಅಲೆ ಕೊಡಗಿನಲ್ಲಿ ಮರಣಮೃದಂಗ ಬಾರಿಸುತ್ತಿದ್ದಂತೆ ಮೈಕೊಡವಿ ಮೇಲೆದ್ದ ಜಿಲ್ಲೆಯ ಶಾಸಕರುಗಳು ಹಲವಷ್ಟು ಸುಧಾರಣಾ ಕ್ರಮಗಳನ್ನು ಜಿಲ್ಲಾಡಳಿತದ ಮೂಲಕ ಅನುಷ್ಠಾನಗೊಳಿಸಿ, ಸಾವಿನ ಸರಮಾಲೆಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದಾರೆ.

ಮಾಜಿ ವಿಧಾನಸಭಾಧ್ಯಕ್ಷ ಹಾಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಾಜಿ ಸಚಿವ, ಹಾಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರುಗಳು ಕೊಡಗಿನ ಮೂಲೆ ಮೂಲೆಗೆ ಸುತ್ತಾಟ ನಡೆಸಿ, ಕೊರೊನಾ ಸಂಬAಧಿತ ಸುಧಾರಣಾ ಕ್ರಮಗಳ ಬಗ್ಗೆ ಮುತುವರ್ಜಿ ವಹಿಸಿದ್ದಾರೆ.

ಪ್ರಥಮ ಅಲೆಯಿಂದ ಹೊರಬಂದ ನಂತರ ೨ನೇ ಅಲೆಯ ಪ್ರಾರಂಭದಲ್ಲಿ ನಿರ್ಲಕ್ಷö್ಯತೆ ವಹಿಸಿದ್ದರ ಪರಿಣಾಮ ಈಗಾಗಲೇ ಸಾವಿನ ಸಂಖ್ಯೆ ‘ತ್ರಿ ಡಿಜಿಟ್’ ತಲುಪಿದೆ. ಸಾವಿನ ಪ್ರಮಾಣದಿಂದ ಭಾರೀ ಆತಂಕಕ್ಕೆ ಒಳಗಾಗಿದ್ದ ಕೊಡಗು, ಇದೀಗ ಸಹಜ ಉಸಿರಾಟಕ್ಕೆ ಮರಳಲು ಯತ್ನಿಸುತ್ತಿದೆ. ಕಳೆದ ೧೦ ದಿನಗಳಿಂದ ಸಾವಿನ ಪ್ರಮಾಣ ಇಳಿಮುಖಗೊಳ್ಳುತ್ತಿದ್ದು, ನೆಮ್ಮದಿಯ ಭಾವ ಮೂಡುವಂತೆ ಮಾಡಿದೆ. ಇದರ ಹಿಂದೆ ವೈದ್ಯರುಗಳ ಕರ್ತವ್ಯ, ಜಿಲ್ಲಾಡಳಿತ, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು ಹಾಗೂ ಶಾಸಕರುಗಳ ಶ್ರಮ ಅಪಾರವಾಗಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಇಡೀ ರಾಜ್ಯಕ್ಕೆ ಮಾದರಿಯಾದ ನಡೆಯಾಗಿ ಪಿಪಿಇ ಕಿಟ್ ಧರಿಸಿ ಕೋವಿಡ್ ಸೋಂಕಿತರನ್ನು ಭೇಟಿಯಾಗಿದ್ದು, ಇದರ ಪರಿಣಾಮ ಆಸ್ಪತ್ರೆಯ ವೈದ್ಯರಿಂದ ಹಿಡಿದು ಸಿಬ್ಬಂದಿಗಳಲ್ಲೂ ಚೈತನ್ಯ ಮೂಡಿಸಿದೆ. ಸೋಂಕಿತರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ಆಸ್ಪತ್ರೆಯೊಳಗಿನ ನ್ಯೂನತೆಗಳನ್ನು ಪರಿಶೀಲಿಸಿ, ಸಮರ್ಪಕ ಗೊಳಿಸಿದ ನಂತರ ಮಡಿಕೇರಿ ಕೋವಿಡ್ ಕೇರ್ ಸೆಂಟರ್‌ನ ಮೇಲಿದ್ದ ಅಪವಾದಗಳು ಕಡಿಮೆ ಯಾಗಲಾರಂಭಿಸಿದವು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಕೊರೊನಾ ೨ನೇ ಅಲೆಯ ಪ್ರಾರಂಭದಿAದಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಟ ನಡೆಸಿ ಸ್ಥಳೀಯ ಟಾಸ್ಕ್ಫೋರ್ಸ್ ಸಮಿತಿ ಸಭೆಗಳನ್ನು ಆಯೋಜಿಸಿ, ಸೂಕ್ತ ಮಾರ್ಗದರ್ಶನ ನೀಡಿದ್ದರ ಫಲವಾಗಿ ವೀರಾಜಪೇಟೆ ವ್ಯಾಪ್ತಿಯಲ್ಲಿ ಕೊರೊನಾ ಹಬ್ಬುವಿಕೆಗೆ ಒಂದಿಷ್ಟು ಕಡಿವಾಣ ಬಿದ್ದಿದೆ.

ಆದರೂ ವೀರಾಜಪೇಟೆಯ ೭ ಮತ್ತು ಮಡಿಕೇರಿಯ ೩ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಿದ್ದು, ಇವುಗಳನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ಹಾಟ್‌ಸ್ಪಾಟ್ ಗ್ರಾಮಗಳಿಗೆ ಸಂಸದ ಪ್ರತಾಪ್‌ಸಿಂಹ ಅವರೊಂದಿಗೆ ತಾ. ೧೪ ರಂದು ಕೆ.ಜಿ. ಬೋಪಯ್ಯ ಅವರು ಭೇಟಿ ನೀಡಲಿದ್ದಾರೆ. ಇನ್ನು ಜಿಲ್ಲೆಯ ಈರ್ವರು ವಿಧಾನ ಪರಿಷತ್ ಸದಸ್ಯರುಗಳು ಜಿಲ್ಲಾದ್ಯಂತ ಓಡಾಟ ನಡೆಸಿ, ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಂ.ಪಿ. ಸುನಿಲ್ ಸುಬ್ರಮಣಿ ಅವರು ವೀರಾಜಪೇಟೆ ಹಾಗೂ ಮಡಿಕೇರಿಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಕೆಲವು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಉಳಿದ ಗ್ರಾ.ಪಂ.ಗಳ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.

ವೀಣಾ ಅಚ್ಚಯ್ಯ ಅವರು ಸೀಲ್‌ಡೌನ್ ಆಗಿರುವ ಕುಟುಂಬಗಳು, ಕಂಟೈನ್‌ಮೆAಟ್ ಜೋನ್‌ಗಳು, ಕೋವಿಡ್ ಕೇರ್‌ಸೆಂಟರ್ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಭೇಟಿ ಸಂದರ್ಭ ಕಂಡುಬAದ ನ್ಯೂನತೆಗಳನ್ನು ಜಿಲ್ಲಾಡಳಿತದ ಮೂಲಕ ಸರಿಪಡಿಸಿದ್ದಾರೆ.

ಶಾಸಕರುಗಳು ಜಿಲ್ಲೆಯನ್ನು ಕೊರೊನಾ ಮುಕ್ತವಾಗಿಸಲು ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಓಡಾಟ ನಡೆಸುತ್ತಿದ್ದಾರೆ. ಹಲವಷ್ಟು ಟೀಕೆಗಳ ನಡುವೆಯೂ ಕೊರೊನಾ ಸಂಬAಧಿತ ಕಾರ್ಯಗಳಿಂದ ಹಿಂದೆ ಸರಿಯದೇ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಚೆಕ್‌ಪೋಸ್ಟ್ಗಳು, ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಆಗಾಗ್ಗೆ ಅಧಿಕಾರಿಗಳ ಸಭೆ ನಡೆಸುವ ಮೂಲಕ ಕೊರೊನಾ ಹಬ್ಬುವಿಕೆ ತಡೆಗಟ್ಟಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.

೨ನೇ ಅಲೆ ಪ್ರಾರಂಭದ ದಿನಗಳಲ್ಲಿ ದಿನವೊಂದಕ್ಕೆ ಸರಾಸರಿ ೮ ರಿಂದ ೧೦ ರಷ್ಟಿದ್ದ ಮರಣ ಪ್ರಮಾಣ ಇತ್ತೀಚಿಗೆ ಕಡಿಮೆಯಾಗಿದೆ. ಈ ಹಿಂದೆ ದಿನವೊಂದಕ್ಕೆ ೧೦ಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದು, ಕಳೆದ ೪೮ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೧ ಸಾವು ಸಂಭವಿಸಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೧೩ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ಒಟ್ಟು ೨೩೫ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಮಡಿಕೇರಿಯಲ್ಲಿ ೪೨, ಸೋಮವಾರಪೇಟೆಯಲ್ಲಿ ೧೦೫, ವೀರಾಜಪೇಟೆಯಲ್ಲಿ ೮೮ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ೧೮ ಕಂಟೈನ್‌ಮೆAಟ್ ವಲಯ ಎಂದು ಗುರುತಿಸಲಾಗಿದ್ದು, ೨೩ ಕಂಟೈನ್‌ಮೆAಟ್ ವಲಯಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಈವರೆಗೆ ಕೊಡಗಿನಲ್ಲಿ ೨೬,೭೫೬ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ೨೪,೩೧೪ ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ ೨೧೦೦ ಮಂದಿ ಸೋಂಕಿಗೆ ಒಳಗಾಗಿ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ, ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ೩೪೨ ಮಂದಿ ಸೋಂಕಿನಿAದ ಮೃತರಾಗಿದ್ದಾರೆ. ಸದ್ಯ ಕೊಡಗಿನ ಕೋವಿಡ್ ಪಾಸಿಟಿವಿಟಿ ದರ ಶೇ. ೯.೮ರಷ್ಟಿದೆ.

ಈ ನಡುವೆ ತಾ. ೧೪ರ ನಂತರ ಕೊಡಗು ಅನ್‌ಲಾಕ್ ಆಗಲಿದೆಯೇ ಎಂಬ ಪ್ರಶ್ನೆಯೂ ಮೂಡಿದೆ. ತಾ. ೧೪ರ ಒಳಗೆ ಶೇ.೫ಕ್ಕಿಂತ ಕಡಿಮೆಗೆ ಪಾಸಿಟಿವಿಟಿ ದರ ಇಳಿದರೆ ಹಂತಹAತವಾಗಿ ಅನ್‌ಲಾಕ್ ಮಾಡುವ ಬಗ್ಗೆ ಜಿಲ್ಲೆಯ ಶಾಸಕರು ಒಲವು ತೋರಿದ್ದು, ತಾ. ೧೧ರಂದು (ಇಂದು) ಉಸ್ತುವಾರಿ ಸಚಿವರ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.

ಕೋವಿಡ್ ಹತೋಟಿಗೆ ಬಂದರೆ ಮಾತ್ರ ಹಂತಹAತವಾಗಿ ಅನ್‌ಲಾಕ್ ಮಾಡುವ ಬಗ್ಗೆ ಯೋಚಿಸಬಹುದು ಎಂದು ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅಭಿಪ್ರಾಯಿಸಿದ್ದಾರೆ. ತಾ. ೧೪ರ ನಂತರ ಅನ್‌ಲಾಕ್ ಮಾಡುವ ಬದಲು ಮುಂದಿನ ೧೫ ದಿನಗಳವರೆಗೆ ಲಾಕ್‌ಡೌನ್ ವಿಸ್ತರಿಸುವುದು ಸೂಕ್ತ. ಕೊರೊನಾ ಕಡಿಮೆಯಾಗಿದೆ ಎಂದು ಜನತೆ ಎಚ್ಚರ ತಪ್ಪಬಾರದು ಎಂದು ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಅಭಿಮತ ವ್ಯಕ್ತಪಡಿಸಿದ್ದಾರೆ.

ಕೊರೊನಾ ಕ್ಲಿಷ್ಟಕರ ಸಂದರ್ಭದಲ್ಲೂ ಜಿಲ್ಲೆಯಾದ್ಯಂತ ಓಡಾಟ ನಡೆಸುತ್ತಿರುವ ಶಾಸಕರುಗಳಿಗೆ ಅವರ ಕುಟುಂಬ ದವರೂ ಆಸರೆಯಾಗಿ ನಿಂತಿದ್ದಾರೆ. ಅಪ್ಪಚ್ಚುರಂಜನ್ ಅವರಿಗೆ ಎರಡು ಮಾಸ್ಕ್ನ್ನು ಅವರ ಪತ್ನಿಯೇ ಹಾಕಿ ಕಳುಹಿಸುತ್ತಾರೆ! ಸುನಿಲ್ ಸುಬ್ರಮಣಿ ಅವರ ಪತ್ನಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಾರೆ. ಕೆ.ಜಿ. ಬೋಪಯ್ಯ ಅವರ ಪತ್ನಿ ‘ನಿಮ್ಮ ಆರೋಗ್ಯವನ್ನೂ ನೋಡಿಕೊಳ್ಳಿ’ ಎಂದು ಸಲಹೆ ನೀಡುತ್ತಿದ್ದಾರೆ. ವೀಣಾ ಅಚ್ಚಯ್ಯ ಅವರ ಪತಿ ತನ್ನ ಪತ್ನಿಯ ಸಾಮಾಜಿಕ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.

-ವಿಜಯ್ ಹಾನಗಲ್