ಮಡಿಕೇರಿ, ಜೂ. ೧೦: ಕೋವಿಡ್ ಕಾರಣದಿಂದಾಗಿ ಸಹಕಾರ ಸಂಘಗಳ ಮೂಲಕ ಪಡೆದಿರುವ ಸಾಲ ಮರುಪಾವತಿ ಕುರಿತಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಸರಕಾರದ ಆದೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಾಗಿ ಸರಕಾರ ನೀಡಿರುವ ಕಾಲಾವಕಾಶದ ಬಗ್ಗೆ ಸಾಲ ಪಡೆದಿರುವ ಮಂದಿ ಹಲವು ಗೊಂದಲಕ್ಕೆ ಒಳಗಾಗಿದ್ದು, ಬ್ಯಾಂಕ್‌ನ ಶಾಖೆ ಹಾಗೂ ವಿ.ಎಸ್.ಎಸ್.ಎನ್.ಗಳನ್ನು ಸಂಪರ್ಕಿಸಿ ಪ್ರಶ್ನಿಸುತ್ತಿದ್ದಾರೆ. ಇದರ ನಡುವೆ ತಾ. ೯ರಂದು ಸರಕಾರದ ಮೂಲಕ ಹೊಸ ಆದೇಶ ಬಂದಿದ್ದು, ಇದರಂತೆ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ.

ರಾಜ್ಯದ ಜನತೆಯು ಸಂಕಷ್ಟದಲ್ಲಿರುವುದರಿAದ ಸಾಲ ಮರುಪಾವತಿಸಲು ಕಾಲಾವಕಾಶ ನೀಡಿ ರಾಜ್ಯ ಸರಕಾರವು ದಿನಾಂಕ ೦೧.೦೪.೨೦೨೧ರಿಂದ ೩೦.೦೬.೨೦೨೧ರವರೆಗೆ ಸ್ವ ಸಹಾಯ ಗುಂಪುಗಳು / ರೈತರು ಪಾವತಿಸಬೇಕಾದ ಕಂತುಗಳನ್ನು ಅಂದರೆ, ಅಸಲು ಪಾವತಿಸಲು ಮೊರಟೋರಿಯಂ ನೀಡಿದೆ. ಒಟ್ಟಾರೆ ಇರುವ ಕಂತುಗಳನ್ನು ಹೆಚ್ಚಿಸಿ ಕಡೇ ಕಂತುಗಳಲ್ಲಿ ಮರುಪಾವತಿಸಲು ಕಾಲಾವಕಾಶ ನೀಡಿರುತ್ತದೆ. (ಅಂದರೆ ಈ ಮೂರು ತಿಂಗಳಿನಲ್ಲಿ ಬರುವ ಕಂತುಗಳನ್ನು ಈಗಾಗಲೇ ನಿಗದಿಪಡಿಸಿರುವ ಕೊನೆಯ ಕಂತಿನ ನಂತರ ಪಾವತಿಸುವಂತೆ) ಅಲ್ಲದೆ, ಜೂನ್ ೨೦೨೧ರ ಅಂತ್ಯಕ್ಕೆ ಸದಸ್ಯರು ಪಾವತಿಸಲು ಬಾಕಿ ಉಳಿಯುವ ಅವರ ಪಾಲಿನ ಬಡ್ಡಿಯನ್ನು ದಿ.೩೧.೦೩.೨೦೨೨ರ ಒಳಗೆ ಪಾವತಿಸಲು ಕಾಲಾವಕಾಶ ನೀಡಲಾಗಿರುತ್ತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.