ಗೋಣಿಕೊಪ್ಪಲು, ಜೂ. ೧೦: ಕೊರೊನಾ ಸಂಕಷ್ಟ ಸಮಯ ಇಲ್ಲದಿದ್ದಲ್ಲಿ ಜೂನ್ ೧ ರಿಂದ ಹೊಸ ಶೈಕ್ಷಣಿಕ ವರ್ಷವು ಆರಂಭವಾಗುತ್ತಿತ್ತು. ಆದರೆ ಕೊರೊನಾ ಮಹಾಮಾರಿಯಿಂದ ಇಡೀ ದೇಶದಲ್ಲಿ ಅನೇಕ ರೀತಿಯ ಜಟಿಲ ಸಮಸ್ಯೆಗಳು ಎದುರಾಗಿದ್ದು, ಎಸ್.ಎಸ್.ಎಸ್.ಸಿ. ಪರೀಕ್ಷೆ ನಡೆಸುವುದು ಸೂಕ್ತವಲ್ಲ.

ಕೋವಿಡ್ ಇರುವ ಕಾರಣ ಇಂತಹ ದುಸ್ಸಾಹಸಕ್ಕೆ ಸರಕಾರ ಕೈ ಹಾಕಬಾರದು ಎಂದು ಕಾಂಗ್ರೆಸ್ ವಕ್ತಾರರಾದ ಸರಿತಾ ಪೂಣಚ್ಚ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿಕ್ಷಣ ಕ್ಷೇತ್ರ ಉಳಿದ ಕ್ಷೇತ್ರಕ್ಕಿಂತ ವಿಭಿನ್ನವಾಗಿದೆ. ದೇಶದ ಪ್ರಧಾನಿ ಕೇಂದ್ರ ಸರಕಾರದ ವ್ಯಾಪ್ತಿಯ ಸಿ.ಬಿ.ಎಸ್.ಸಿ. ಹಾಗೂ ಐ.ಸಿ.ಎಸ್.ಇ. ಪರೀಕ್ಷೆ ಮುಂದೂಡಿದ್ದಾರೆ. ರಾಜ್ಯ ಸರ್ಕಾರ ಪಿ.ಯು.ಸಿ. ಪರೀಕ್ಷೆಯನ್ನು ರದ್ದುಗೊಳಿಸಿದೆ. ಆದರೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದ ಶಾಲಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸದಂತೆ ಕ್ರಮಕೈಗೊಳ್ಳಬೇಕು ಎಂದು ಸರಿತಾ ಪೂಣಚ್ಚ ಆಗ್ರಹಿಸಿದ್ದಾರೆ.