ಸುಂಟಿಕೊಪ್ಪ, ಜೂ. ೯: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್೧೯ ಅಬ್ಬರದ ನಡುವೆ ಒಬ್ಬರೆ ಶುಶ್ರೂಷಕಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಬಂದೊದಗಿದೆ.

ಸುAಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಓರ್ವ ನರ್ಸ್ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ.

ಈ ಆಸ್ಪತ್ರೆಗೆ ೩ ಮಂದಿ ಶುಶ್ರೂಷಕಿಯರಿದ್ದು, ಓರ್ವರು ಹೆರಿಗೆ ರಜೆಯಲ್ಲಿದ್ದು, ಇನ್ನೋರ್ವರನ್ನು ಮಡಿಕೇರಿ ಕೋವಿಡ್ ಆಸ್ಪತ್ರೆ ಡೆಪ್ಯುಟೇಶನ್ ಮೇಲೆ ವರ್ಗಾವಣೆಗೊಳಿಸಲಾಗಿದೆ. ಉಳಿದಿರುವ ಒಬ್ಬರೇ ಪ್ರತಿದಿನ ರಾತ್ರಿ ಪಾಳಿ ಕರ್ತವ್ಯದೊಂದಿಗೆ ಹಗಲಿನ ವೇಳೆ ತುರ್ತು ಸೇವೆಗೂ ಕರ್ತವ್ಯ ನಿರ್ವಹಿಸುವಂತಾಗಿದೆ.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ೧೧ ಉಪಕೇಂದ್ರಗಳನ್ನು ಹೊಂದಿದೆ. ೧೧ ಮಂದಿಯಲ್ಲಿ ಕೆಲವು ಮಂದಿ ಮುಂಬಡ್ತಿ ಪಡೆದರೆ, ಮತ್ತೆ ೫ ಮಂದಿ ವಯೋ ನಿವೃತ್ತಿಗೊಂಡಿದ್ದಾರೆ. ಇದರಿಂದ ಕೇವಲ ೬ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳು ಕೂಡಲೇ ಹೆಚ್ಚುವರಿ ಶುಶ್ರೂಷಕಿಯರನ್ನು ಕರ್ತವ್ಯಕ್ಕೆ ನಿಯೋಜಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಂಟಿಕೊಪ್ಪ ಪಟ್ಟಣಕ್ಕೆ ಆಗಮಿಸಿದ ಶಾಸಕರಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ.ಆರ್.ಸುನಿಲ್ ಕುಮಾರ್, ಶಾಂತಿ, ಮಂಜುಳಾ, ಗೀತಾ ಹಾಗೂ ವಸಂತಿ ಹಾಗೂ ಪಕ್ಷದ ಕಾರ್ಯಕರ್ತರು ಶುಶ್ರೂಷಕಿಯರ ಕೊರತೆಯ ಬಗ್ಗೆ ಗಮನಕ್ಕೆ ತಂದು, ತಕ್ಷಣ ನಿಯೋಜನೆಗೊಳಿಸುವಂತೆ ಮನವಿ ಮಾಡಿಕೊಂಡರು.