ಸಿದ್ದಾಪುರ, ಜೂ. ೯: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಕೊರೊನಾ ನಿಗ್ರಹ ದಳ ಸಭೆಯು ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಸರಕಾರಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ರಂಜನ್ ಅವರು, ಕೊರೊನಾ ವೈರಸ್ ಎರಡನೇ ಅಲೆಯು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅನಗತ್ಯವಾಗಿ ಓಡಾಡಬಾರದೆಂದರು. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರಕಾರ ಹಾಗೂ ಜಿಲ್ಲಾಡಳಿತ ಬಿಗಿ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದಾಗ್ಯೂ ಅನಗತ್ಯವಾಗಿ ಓಡಾಡುತ್ತಿರುವ ಮಂದಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೊರೊನಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಹಾಗೂ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜನ ಸಹಕರಿಸಬೇಕೆಂದು ತಿಳಿಸಿದರು. ಕೊರೊನಾ ನಿಗ್ರಹ ಪಡೆಯ ಸಭೆಯನ್ನು ವಾರಕ್ಕೆ ಎರಡು ಬಾರಿ ಸಭೆ ನಡೆಸಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ಪಿಡಿಓ ಅನಿಲ್ ಕುಮಾರ್ಗೆ ಸೂಚನೆ ನೀಡಿದರು.
ಸಭೆಯಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ವೈದ್ಯಾಧಿಕಾರಿ ಡಾ. ಪ್ರತಾಪ್ ಸಾಗರ್, ಹೋಬಳಿ ನೋಡಲ್ ಅಧಿಕಾರಿ ಮಹಾಲಿಂಗಯ್ಯ, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಆಹಾರ ನಿರೀಕ್ಷಕ ಮೋಹನ್ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ಅನಿತಾ ಹಾಗೂ ಗ್ರಾ.ಪಂ. ಸದಸ್ಯರುಗಳು, ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳು ಹಾಜರಿದ್ದರು. ಪಿಡಿಓ ಅನಿಲ್ ಕುಮಾರ್ ಸ್ವಾಗತಿಸಿ, ವಂದಿಸಿದರು.