ಚಿನ್ನೇನಹಳ್ಳಿ - ಆರನೇಹೊಸಕೋಟೆ ಗ್ರಾಮಗಳು ಕೊರೊನಾ ಮುಕ್ತ

ಕಣಿವೆ, ಜೂ. ೯: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿ ಗಿರಿಜನ ಹಾಡಿಯ ಜನವಸತಿ ಪ್ರದೇಶ ಕೊರೊನಾ ಮುಕ್ತವಾಗಿದೆ.

ಹಾಡಿಯಲ್ಲಿ ೨೫ಕ್ಕೂ ಹೆಚ್ಚು ಗಿರಿಜನ ಕುಟುಂಬಗಳಿದ್ದು, ಬಹುತೇಕ ಎಲ್ಲರೂ ಕೃಷಿ ಕೂಲಿ ಕಾರ್ಮಿಕರಾಗಿಯೇ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಇದೇ ಹಾಡಿಯ ಆಸುಪಾಸಿನಲ್ಲಿ ೧೦ ರಿಂದ ೧೫ ಇತರೇ ಕುಟುಂಬಗಳು ಇದ್ದು ಕಳೆದ ವರ್ಷ ಕಾಡಿದ ಮೊದಲ ಕೊರೊನಾ ಅಲೆಯಾಗಲೀ, ಈ ಬಾರಿ ಕಾಡಿಸಿದ ಎರಡನೇ ಅಲೆಯಿಂದ ಆಗಲೀ ಯಾವುದೇ ದುಷ್ಪರಿಣಾಮ ಗ್ರಾಮಕ್ಕೆ ಬೀರಿಲ್ಲ ಎಂದು ಇಲ್ಲಿನ ನಿವಾಸಿ ಮಂಜುಳಾ, ಸುಂದರಿ, ಆನಂದರೆಡ್ಡಿ, ನಾಗೇಶ, ಕಾಳ ಮೊದಲಾದವರು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದರು.

ಹಾಗೆಯೇ ಈ ಹಾಡಿಯ ಅನತಿ ದೂರದಲ್ಲೇ ಇರುವ ಆರನೇ ಹೊಸಕೋಟೆ ಗ್ರಾಮದಲ್ಲೂ ಇದುವರೆಗೆ ಯಾವುದೇ ಕೋವಿಡ್ ಪ್ರಕರಣಗಳು ಬಾಧಿಸದ ಬಗ್ಗೆ ಅಲ್ಲಿನ ಹಿರಿಯ ನಿವಾಸಿ ಕೃಷಿ ಕಾರ್ಮಿಕ ಮಹಿಳೆ ಸಣ್ಣನಿಂಗಮ್ಮ, ಸಾಕಮ್ಮ, ಅಕ್ಕಮ್ಮ ಮೊದಲಾದವರು ಮಾಹಿತಿ ನೀಡಿದರು.

ನಾವು ಚಿನ್ನೇನಹಳ್ಳಿ ಬೆಟ್ಟ ಸಾಲಿನ ಗುಡ್ಡದಲ್ಲಿ ವಾಸವಿರುವವರು. ಸೂರ್ಯ ಮೂಡಿದರೆ ಸಾಕು, ಹೊಲಕ್ಕೆ ಹೋಗಿ ಹೊತ್ತು ಮುಳುಗೋವರೆಗೂ ದುಡಿಯೋರು ನಾವು. ಹಾಗಾಗಿ ನಮಗೆಲ್ಲಾ ದೂರದ ದೇಶದ ಯಾವ ಕಾಯಿಲೆಗಳು ಬರಲ್ಲ. ಇದುವರೆಗೂ ಬಂದಿಲ್ಲ ನೋಡಿ. ಅಯ್ಯೋ ಟಿವಿ ಮುಂದೆ ಕೂತು ದಿನವೂ ಸಾಯೋರ ನೋಡಿ ಹೊಟ್ಟೆ ಕರುಳು ಕಿತ್ತು ಬರುತ್ತೆ, ಸಂಕಟವಾಗುತ್ತೆ. ಒಂದು ಸಾರಿ ಈ ಹಾಳು ರೋಗ ಈ ದೇಶದಿಂದ ಹೋಗಲಿ ಎಂದು ದೇಶವಾಸಿಗಳ ಹಿತ ಬಯಸಿದರು ಸಣ್ಣನಿಂಗಮ್ಮ.