ಸಿದ್ದಾಪುರ, ಜೂ. ೮: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತ್ಯಧಿಕ ಕೊರೊನಾ ವೈರಸ್ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಅವರು ನೆಲ್ಲಿಹುದಿಕೇರಿ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರಪೇಟೆ ತಾಲೂಕಿನಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ಕಂಡುಬAದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ತಹಶೀಲ್ದಾರ್ ಗೋವಿಂದರಾಜ್ ಅವರು ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕೊರೊನಾ ವೈರಸ್ ಪತ್ತೆಯಾದ ಮನೆಗಳಿಗೆ ತೆರಳಿ ಅವರ ಮನೆಯಲ್ಲಿ ಎಷ್ಟು ಮಂದಿ ವಾಸವಾಗಿದ್ದಾರೆ, ಪ್ರತ್ಯೇಕ ಶೌಚಾಲಯಗಳು ಇದೆಯೇ, ಕುಟುಂಬದವರು ಒಂದೇ ಮನೆಯಲ್ಲಿ ವಾಸವಿದ್ದಾರೆಯೋ ಎಂದು ಸೋಂಕಿತರಿAದ ಮಾಹಿತಿ ಪಡೆದುಕೊಂಡರು.

ಅಲ್ಲದೆ ಒಂದೇ ಮನೆಯಲ್ಲಿ ಸೋಂಕಿತರು ಇದ್ದಲ್ಲಿ ಅವರಿಗೆ ಬದಲಿ ಶೌಚಾಲಯ ವ್ಯವಸ್ಥೆ ಇಲ್ಲದಿದ್ದಲ್ಲಿ ಅಂತವರು ಕೋವಿಡ್ ಕೇರ್ ಸೆಂಟರ್‌ಗೆ ತೆರಳಿ ಅಲ್ಲಿ ಆಶ್ರಯ ಪಡೆಯುವಂತೆ ತಿಳಿಸಿದರು. ಅಲ್ಲದೆ ಯಾವುದೇ ಕಾರಣಕ್ಕೂ ಸೋಂಕಿತರು ಮನೆಯಲ್ಲಿ ಇರದೇ ಬೇರೆಯವರಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಕೇರ್ ಸೆಂಟರ್‌ಗೆ ತೆರಳುವಂತೆ ಮನವಿ ಮಾಡಿಕೊಂಡರು.

ನAತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಗೋವಿಂದರಾಜ್, ಇತ್ತೀಚೆಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದಂತಹ ಟಾಸ್ಕ್ ಫೋರ್ಸ್ ಸಭೆಯಲ್ಲಿ ತಿಳಿಸಿದಂತೆ ಯಾವುದೇ ಗ್ರಾಮಗಳಲ್ಲಿ ೧೦ ಕ್ಕಿಂತಲೂ ಅಧಿಕ ಸೋಂಕಿತರು ಪತ್ತೆಯಾದಲ್ಲಿ ಅವರುಗಳ ಗಂಟಲು ದ್ರವ ಪರೀಕ್ಷೆ ಮಾಡುವಂತೆ ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಪ್ರಕರಣಗಳು ಹೆಚ್ಚಾಗಿರುವುದರಿಂದ ಸೋಂಕಿತರ ಕುಟುಂಬದವರ ದ್ರವ ಪರೀಕ್ಷೆಯನ್ನು ಸ್ಥಳದಲ್ಲೇ ಮಾಡಿ ವರದಿ ನೀಡಲಾಗುವುದೆಂದರು.

ಈಗಾಗಲೇ ಸೋಂಕಿತರಿಗೆ ಆಶ್ರಯ ಪಡೆಯಲು ಸೋಮವಾರಪೇಟೆ ತಾಲೂಕಿನಲ್ಲಿ ಮೂರು ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಮುಖ್ಯ ಎಂದರು. ಪ್ರಕರಣ ಪತ್ತೆ ಆದವರು ಮನೆಯನ್ನು ಬಿಟ್ಟು ಅನಗತ್ಯವಾಗಿ ಸುತ್ತಾಡಿದರೆ ಹಾಗೂ ಸರಕಾರದ ಮಾರ್ಗಸೂಚಿ ಅನುಸರಿಸದೇ ಕೋವಿಡ್ ಕೇರ್ ಸೆಂಟರ್‌ಗೆ ತೆರಳದಿದ್ದಲ್ಲಿ ಅಂತಹವರ ವಿರುದ್ಧ ಟಾಸ್ಕ್ ಫೋರ್ಸ್ ಸಮಿತಿಯವರು ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಇದೇ ಸಂದರ್ಭ ಕೆಲವರ ಗಂಟಲು ದ್ರವ ಪರೀಕ್ಷೆ ಮಾಡಲಾಯಿತು.

ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು. ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಗ್ರಾಮಗಳ ಬಗ್ಗೆ ಆರೋಗ್ಯ ಇಲಾಖೆ ಸೇರಿದಂತೆ ಟಾಸ್ಕ್ ಫೋರ್ಸ್ ಸಮಿತಿಯು ಹೆಚ್ಚಿನ ಮುತುವರ್ಜಿ ವಹಿಸಿ ಕೊರೊನಾ ಪ್ರಕರಣಗಳನ್ನು ಕಡಿಮೆಗೊಳಿಸಲು ಶ್ರಮವಹಿಸುತ್ತದೆ ಎಂದರು.

ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಲಸಿಕೆಯನ್ನು ಪಡೆಯಲು ಹಿಂದೇಟು ಹಾಕದೇ ಗ್ರಾಮಸ್ಥರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆಯನ್ನು ವಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಶಾದಿಮಹಲ್ ಸಭಾಂಗಣವನ್ನು ಕೋವಿಡ್ ಕೇರ್ ಸೆಂಟರ್ ಮಾಡಬೇಕೆಂದು ನೆಲ್ಲಿಹುದಿಕೇರಿ ಶಾದಿಮಹಲ್‌ನ ಕಾರ್ಯದರ್ಶಿ ಎ.ಕೆ. ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಮಣಿ ಮೊಹಮ್ಮದ್ ಅವರು ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್ ಮುಖಾಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದರು.

ಈ ಸಂದರ್ಭ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಕುಶಾಲನಗರ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಿಗ ಸಚಿನ್, ವೈದ್ಯಾಧಿಕಾರಿ ಡಾ. ತೇಜಸ್ವಿ, ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್, ಪಿಡಿಓ ಅನಿಲ್ ಕುಮಾರ್ ಹಾಗೂ ಗ್ರಾ.ಪಂ. ಸದಸ್ಯರುಗಳು, ಕೊರೊನಾ ನಿಗ್ರಹ ಪಡೆಯ ಸದಸ್ಯರುಗಳು ಹಾಜರಿದ್ದರು.

-ವಾಸು