v ಕೊಡಗಿನಲ್ಲಿ ಪತ್ರಕರ್ತರ ತಂಡದ ಶ್ಲಾಘನೀಯ ಕೆಲಸ v ಅಶಕ್ತರಿಗೆ - ಅನಿವಾರ್ಯತೆಗೆ ಅಗತ್ಯ ನೆರವು
ಮಡಿಕೇರಿ, ಜೂ. ೭: ಕೊಡಗು ಜಿಲ್ಲೆಯಲ್ಲಿ ಕೆಲವು ಉತ್ಸಾಹಿ ಯುವ ಪತ್ರಕರ್ತರು ಸೇರಿಕೊಂಡು ಪ್ರಸ್ತುತದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಮಾಜದ ವಿವಿಧ ಸ್ತರದ ಅಶಕ್ತರಿಗೆ-ಅನಿವಾರ್ಯತೆಗೆ, ತುರ್ತು ಅವಶ್ಯಕತೆಗಳಿಗೆ ನೆರವಾಗುವ ಮೂಲಕ ಉತ್ತಮವೆನಿಸುವ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವುದು ಗಮನಾರ್ಹವಾಗಿದೆ. ಮಾಧ್ಯಮ ಸ್ಪಂದನ ಎಂಬ ಹೆಸರಿನೊಂದಿಗೆ ಉತ್ಸಾಹಿಗಳ ತಂಡದ ಮೂಲಕ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದಂತೆ ಈ ಸೇವಾ ಕಾರ್ಯ ಕಳೆದ ವರ್ಷದಿಂದ ಆರಂಭಗೊAಡಿದೆ. ಇದು ಜಿಲ್ಲೆಯಲ್ಲಿ ಹಲವಾರು ಜನರಿಗೆ ಹಲವಾರು ರೀತಿಯಲ್ಲಿ ನೆರವಾಗುತ್ತಿರುವುದು ಕಂಡುಬರುತ್ತಿದೆ. ವಿವಿಧ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವ ಜನತೆಗೆ ತಮ್ಮ ಸಮಸ್ಯೆಗಳನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ಮುಟ್ಟಿಸಲು ಕೆಲವಾರು ಕಾರಣಗಳಿಂದ ಸಾಧ್ಯವಾಗದು. ವಿವಿಧ ರೀತಿಯ ಸಮಸ್ಯೆಗಳೊಂದಿಗೆ ಒಂದಷ್ಟು ಅನಿವಾರ್ಯತೆಗಳು - ತುರ್ತು ಅಗತ್ಯತೆಗಳು ಎದುರಾಗಿಬಿಡುತ್ತವೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಅಂತಹ ಮಂದಿಗೆ ನೆರವಾಗುತ್ತಿದೆ ಈ ‘ಮಾಧ್ಯಮ ಸ್ಪಂದನ’.
ಅದರಲ್ಲೂ ಕಳೆದ ವರ್ಷ ಹಾಗೂ ಈ ವರ್ಷ ಎದುರಾಗಿರುವ ಕೊರೊನಾದ ಪರಿಸ್ಥಿತಿ, ಲಾಕ್‌ಡೌನ್ - ಸೀಲ್‌ಡೌನ್ ನಂತಹ ನಿರ್ಬಂಧಗಳ ನಡುವೆ ಬದುಕು ಸಾಗಿಸಬೇಕಾದ ಅನಿವಾರ್ಯತೆಯ ನಡುವಿನ ಅನೇಕ ಸಮಸ್ಯೆಗಳಿಗೆ ಈ ತಂಡ ನೆರವಾಗಿದೆ. ಅದು ದಿನಸಿ ಕಿಟ್‌ಗಳನ್ನು ಒದಗಿಸುವ ಮೂಲಕ, ಔಷಧಿಗಳನ್ನು ತಲುಪಿಸುವಲ್ಲಿ, ಸಿಲುಕಿಹಾಕಿಕೊಂಡ ಮಂದಿಯನ್ನು ಅವರ ಮನೆ - ಊರುಗಳಿಗೆ ಸೇರಿಸುವಲ್ಲಿ, ಆಸ್ಪತ್ರೆಗಳಿಗೆ ಕೊಂಡೊಯ್ಯುವಲ್ಲಿ, ಬಂಧು ಮಿತ್ರರಿಗೆ ಅವರ ಸಂಬAಧಿಕರ - ಪೋಷಕರ ಸಾವಿನ ಸಂದರ್ಭದಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಡಚಣೆಗಳು ಎದುರಾದಾಗ ಅವರನ್ನು ಅಲ್ಲಿಗೆ ತಲುಪಿಸುವಲ್ಲಿ ಈ ರೀತಿಯಾಗಿ ಬಗೆ ಬಗೆಯ ತೊಂದರೆ - ತಾಪತ್ರಯಗಳ ಸಂದರ್ಭದಲ್ಲಿ ಮಾಧ್ಯಮ ಸ್ಪಂದನ ತಂಡಕ್ಕೆ ದೊರೆತ ನಿಖರ ಮಾಹಿತಿಯ ಆಧಾರದಲ್ಲಿ ಅವರುಗಳ ಸಮಸ್ಯೆಗೆ ಸ್ಪಂದಿಸಲಾಗಿದೆ. ಸೇನೆಯಲ್ಲಿನ ಯೋಧರಿಗೂ ಸಹ ಈ ತಂಡ ನೆರವಾಗಿರುವುದು ಕೂಡ ವಿಶೇಷವಾಗಿದೆ.
ಬಹುಶಃ ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಆಡಳಿತ ವರ್ಗಕ್ಕೆ ಸಾಮಾನ್ಯ ಜನತೆ ತಮ್ಮ ಸಂಕಷ್ಟಗಳನ್ನು ತಕ್ಷಣಕ್ಕೆ ಹೇಳಿಕೊಳ್ಳಲು ಸಾಧ್ಯವಾಗದು... ಎಲ್ಲಿಗೆ... ಯಾರಬಳಿ ಹೇಳುವುದು ಎಂಬ ಬಗ್ಗೆಯೂ ಗೊಂದಲ ಉಂಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಇವರೆಲ್ಲರ ನಡುವೆ ಸಂಪರ್ಕಕೊAಡಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಈ ಮಾಧ್ಯಮ ಸ್ಪಂದನ ತಂಡದ ಉತ್ಸಾಹಿ ಪತ್ರಕರ್ತರು.
ಹೊಸ ಪರಿಕಲ್ಪನೆ
ಕೊಡಗು ಪ್ರೆಸ್‌ಕ್ಲಬ್‌ನ ಅಧ್ಯಕ್ಷರಾಗಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ಪರಿಕಲ್ಪನೆಯೊಂದಿಗೆ ಮಾಧ್ಯಮ ಸ್ಪಂದನ ತಂಡ ಅಸ್ತಿತ್ವಕ್ಕೆ ಬಂದಿತು. ಈ ಚಿಂತನೆಗೆ ಹಲವು ಪತ್ರಕರ್ತರೂ ಕೈಜೋಡಿಸಿದರು. ಇದರ ಪರಿಣಾಮವಾಗಿ ಇಂದು ಹಲವು ಜನತೆಯ ಸಂಕಷ್ಟಗಳು ಬಗೆಹರಿಯುತ್ತಿವೆ. ವಿವಿಧ ಕೆಲಸ - ಕಾರ್ಯಗಳನ್ನು ಮಾಡಿಕೊಡುವದರೊಂದಿಗೆ ಕೊರೊನಾದಿಂದಾಗಿ ಮೃತಪಟ್ಟ ಕೆಲವರ ಅಂತ್ಯಕ್ರಿಯೆ ನಡೆಸಲೂ ಸಂಬAಧಿಕರು ಹಿಂಜರಿದ ವೇಳೆ ಅಂತಹವರ ಅಂತ್ಯಕ್ರಿಯೆಯನ್ನು ನಡೆಸಲು ಕೂಡ ತಂಡದ ಸದಸ್ಯರು ಮುಂದಾಗಿದ್ದು ಪ್ರಶಂಸನೀಯ ಹಾಗೂ ಸ್ಮರಣೀಯವಾಗಿದೆ.
ಸಂವಿಧಾನದ ನಾಲ್ಕನೇ ಅಂಗ ಎಂದೇ ‘ಪತ್ರಿಕೋದ್ಯಮವನ್ನು’ ಕರೆಯುತ್ತೇವೆ. ಒತ್ತಡದಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರು ಸರ್ಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ತಲುಪದಲ್ಲಿಗೆ ತಲುಪಿ ಜನರಿಗೆ ನ್ಯಾಯ ಒದಗಿಸುತ್ತಾರೆ. ತಮ್ಮ ಬರವಣಿಗೆಯ ಮೂಲಕ ಅಶಕ್ತರಿಗೆ ನ್ಯಾಯ ಒದಗಿಸುವ ಹಲವಾರು ಪತ್ರಕರ್ತರನ್ನು ನಾವು ನೋಡಿದ್ದೇವೆ.
ಆದರೆ ಕೊಡಗು ಜಿಲ್ಲೆಯಲ್ಲಿ ತಮ್ಮ ಪತ್ರಿಕಾ ವೃತ್ತಿಯೊಂದಿಗೆ ಯಾವುದೇ ಫಲಾಪೇಕ್ಷೆಯಿಲ್ಲದೇ ೫೦ಕ್ಕೂ ಹೆಚ್ಚು ಉತ್ಸಾಹಿ ಪತ್ರಕರ್ತರನ್ನು ಸೇರಿಸಿ ಜಿಲ್ಲೆಯ ಹಿರಿಯ ಪತ್ರಕರ್ತ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾಧ್ಯಮ ಸ್ಪಂದನ ಎಂಬ ತಂಡವನ್ನು ಕಟ್ಟಿ ಯಶಸ್ಸು ಕಂಡಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳ ೫೦ಕ್ಕೂ ಹೆಚ್ಚು ಆಸಕ್ತ ಪತ್ರಕರ್ತರು ಸುದ್ದಿಗೆ ಮಾತ್ರ ಸೀಮಿತಗೊಳ್ಳದೆ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೊಡಗಿನ ಪತ್ರಕರ್ತರು ಈ ಮೂಲಕ ಸಮಾಜ ಸೇವೆಯಲ್ಲೂ "ಸೈ ಎನಿಸಿದ್ದಾರೆ. ಪತ್ರಕರ್ತರು ತಮಗಿರುವ ವಿಶೇಷ ಅವಕಾಶಗಳನ್ನು ದುರುಪಯೋಗಪಡಿಸಿಕೊಂಡ ಹಲವಾರು ಘಟನೆಗಳು ಕೂಡ ನಮ್ಮ ನಡುವೆ ಇದೆ. ಆದರೆ ‘‘ಮಾಧ್ಯಮ ಸ್ಪಂದನ’’ ಸದಸ್ಯರು ಯಾವುದೇ ವಿಷಯದಲ್ಲಿ ಲೋಪದೋಷಗಳಾಗದೆ ಎಚ್ಚರಿಕೆಯಿಂದ ಜನಸೇವೆ ಮಾಡುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ನೊಂದವರಿಗೆ ನೆರವಾಗುತ್ತಿದೆ.
ಕೊರೊನಾ ಸೋಂಕು ಬಾಧಿಸಿ ಗೃಹ ಸಂಪರ್ಕ ತಡೆಗೊಳಗಾಗಿ ಕೆಲಸಕ್ಕೆ ಹೋಗಲು ಅಸಾಧ್ಯವಾಗಿರುವ ಬಡ ಜನರಿಗೆ ದಾನಿಗಳ ನೆರವಿನಿಂದ ಮಾಧ್ಯಮ ಸ್ಪಂದನ ತಂಡ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ.
ರೋಗಿಗಳಿಗೆ ನೆರವು
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸರಿಯಾದ ವಾಹನ ವ್ಯವಸ್ಥೆಯಿಲ್ಲದೆ ನಗರ, ಪಟ್ಟಣಕ್ಕೆ ಬಂದು ಔಷಧಿ ಖರೀದಿಸಲು ಸಾಧ್ಯವಾಗದ ರೋಗಿಗಳು ಹಾಗೂ ಹಾಸಿಗೆ ಹಿಡಿದಿರುವ ರೋಗಿಗಳಿಗೂ ಕೂಡ ಸರಿಯಾದ ಸಮಯಕ್ಕೆ ತಮಗೆ ಬೇಕಾದ ಔಷಧಗಳನ್ನು ನೇರವಾಗಿ ರೋಗಿಗಳ ಮನೆಗೆ ತಲುಪಿಸುವ ಕೆಲಸವನ್ನು "ಮಾಧ್ಯಮ ಸ್ಪಂದನ" ತಂಡ ಮಾಡುತ್ತಿದೆ. ಅಲ್ಲದೇ ಮಂಗಳೂರು, ಮೈಸೂರು, ಬೆಂಗಳೂರು ಆಸ್ಪತ್ರೆಗಳಿಗೆ ಚಿಕಿತ್ಸೆ ತೆರಳಲು ದಾನಿಗಳ ನೆರವಿನಿಂದ "ಮಾಧ್ಯಮ ಸ್ಪಂದನ" ತಂಡ ವಾಹನ ವ್ಯವಸ್ಥೆಯನ್ನು ಮಾಡಿ ಸೂಕ್ತ ಸಮಯಕ್ಕೆ ರೋಗಿಗಳು ಆಸ್ಪತ್ರೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ತೀವ್ರ ತೊಂದರೆಗೀಡಾದ ರೋಗಿಗಳ ಚಿಕಿತ್ಸೆಗೆ ಮಾಧ್ಯಮ ಸ್ಪಂದನ ತಂಡ ಆಸರೆಯಾಗಿದೆ.
ಕೋಮಾ ಸ್ಥಿತಿಯಲ್ಲಿದ್ದ ಬಾಲಕಿಗೆಯೊಬ್ಬಳಿಗೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ, ಈಗ ಆ ಬಾಲಕಿ ಸಾಮಾನ್ಯ ಸ್ಥಿತಿಗೆ ಬಂದಿದ್ದಾಳೆ. ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟ ವೃದ್ಧೆಯೊಬ್ಬರ ಅಂತ್ಯಕ್ರಿಯೆಯನ್ನು ತಂಡದ ಸದಸ್ಯರು ನೆರವೇರಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇವರ ಸೇವೆಗೆ ಜನಪ್ರತಿನಿಧಿಗಳು, ದಾನಿಗಳು, ಉದ್ಯಮಿಗಳು, ರಾಜಕಾರಣಿಗಳು, ಗುತ್ತಿಗೆದಾರರು ಮಾಧ್ಯಮ ಸ್ಪಂದನ ತಂಡದೊAದಿಗೆ ಕೈಜೋಡಿಸುತ್ತಿದ್ದಾರೆ. ಬಡವರಿಂದ ನೆರವಿಗೆ ಮನವಿ ಬಂದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದರ ಮೂಲಕವೂ ದಾನಿಗಳಿಂದ ಅಗತ್ಯ ಸಂಪನ್ಮೂಲದ ವ್ಯವಸ್ಥೆ ಸಿಗುತ್ತಿದೆ.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು
ಓದಲು ಆಸಕ್ತಿಯಿರುವ, ಆದರೆ ಮನೆಯಲ್ಲಿ ಬಡತನವಿರುವ ಜಿಲ್ಲೆಯ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳಬಾರದೆಂದು, ಜಿಲ್ಲೆಯ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಿದ್ದಾರೆ.
ಅಲ್ಲದೇ ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವ್ಯವಸ್ಥೆಯನ್ನು ಕೂಡ ಮಾಧ್ಯಮ ಸ್ಪಂದನ ತಂಡ ಒದಗಿಸಿದೆ. ಈ ತನಕ ಸುಮಾರು ೧೩೦ಕ್ಕೂ ಅಧಿಕ ಸೇವಾ ಕಾರ್ಯ ಈ ತಂಡದ ಮೂಲಕ ನಡೆದಿದೆ.
- ಶಶಿ ಸೋಮಯ್ಯ, ಸಹಕಾರ: ಇಸ್ಮಾಯಿಲ್ ಕಂಡಕೆರೆ