ಮಡಿಕೇರಿ, ಜೂ ೭: ಪೊನ್ನಂಪೇಟೆ ತಾಲೂಕು ಕಚೇರಿ ಕಾರ್ಯಪ್ರವೃತವಾಗಿ ಆರು ತಿಂಗಳು ಕಳೆದರೂ, ತಾಲೂಕು ಕಚೇರಿ ಹಾಗೂ ತಹಶೀಲ್ದಾರರ ಸಂಪರ್ಕಕ್ಕೆ ಸ್ಥಿರ ದೂರವಾಣಿ (ಲ್ಯಾಂಡ್‌ಲೈನ್) ಸಂಪರ್ಕ ಇಲ್ಲದಿರುವುದನ್ನು ಮನಗಂಡು ಪೊನ್ನಂಪೇಟೆ ನಾಗರಿಕ ವೇದಿಕೆ ಸಾರ್ವಜನಿಕರ ಸಹಕಾರದೊಂದಿಗೆ ಸಾರ್ವಜನಿಕರ ಪರವಾಗಿ ಪೊನ್ನಂಪೇಟೆ ತಾಲೂಕು ಕಚೇರಿಗೆ ಎರಡು ದೂರವಾಣಿ ಸಂಪರ್ಕವನ್ನು ಉದಾರವಾಗಿ ಒದಗಿಸಲಾಗಿದೆ. ಹಾಗೆಯೆ ಕಚೇರಿಗೆ ನಾಗರಿಕ ವೇದಿಕೆ ದಾನಿಗಳ ಸಹಕಾರದಿಂದ ಮೂರು ಕಂಪ್ಯೂಟರ್ ಸೆಟ್ ಒದಗಿಸಿ ಕೊಟ್ಟಿದ್ದು ಕೆಲಸದ ಮಧ್ಯೆ ವಿದ್ಯುತ್ ಕಡಿತದಿಂದ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆ ಒಂದು ಇನ್ವರ್ಟರ್ ಹಾಗೂ ಬ್ಯಾಟರಿ ಉಪಕರಣವನ್ನು ನಾಗರಿಕ ವೇದಿಕೆ ಅಳವಡಿಸಿ ಕಚೇರಿಯಿಂದ ನಿರಂತರ ಕೆಲಸ ಕಾರ್ಯಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ನೂತನ ಪೊನ್ನಂಪೇಟೆ ತಾಲೂಕು ಕಚೇರಿಯು ರಾಜ್ಯದಲ್ಲಿ ಮಾದರಿ ತಾಲೂಕು ಕಚೇರಿಯನ್ನಾಗಿ ಕಾರ್ಯ ನಿರ್ವಹಿಸುವಂತೆ ನಾಗರಿಕ ವೇದಿಕೆ ಬಯಸುತ್ತಿದ್ದು, ಆದರೆ ತಾಲೂಕು ಕಚೇರಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಗಳ ನೇಮಕ, ಸರ್ವೆ ಇಲಾಖೆಯ ಸರ್ವೆಯರ್‌ಗಳ ನಿಯೋಜನೆ, ಆಹಾರ ಶಾಖೆಯ ಸಿಬ್ಬಂದಿಗಳ ನಿಯೋಜನೆ, ಭೂ ದಾಖಲಾತಿಗಳ ಮಾಹಿತಿ ಯನ್ನು ಸೇರಿದಂತೆ ನೂತನ ಕಚೇರಿಯಲ್ಲಿ ಸಾರ್ವಜನಿಕರಿಗೆ ಆರ್‌ಟಿಸಿ, ಎಂ.ಸಿ. ದಾಖಲಾತಿ, ಪಡಿತರ ಚೀಟಿ ಸೇರಿದಂತೆ ಹಲವು ಮೂಲಭೂತ ದಾಖಲಾತಿಗಳನ್ನು ಸಾರ್ವಜನಿಕರು ಪಡೆಯಲು ಸಾಧ್ಯವಾಗುತ್ತಿಲ್ಲ.

ಈ ಸಂಬAಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕೆಂದು ಸಮಿತಿ ಪ್ರಮುಖರು ಮನವಿ ಮಾಡಿದ್ದಾರೆ. ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ದೂರವಾಣಿ ಸಂಖ್ಯೆ ೦೮೨೭೪-೨೪೯೬೦೦, ಕಚೇರಿ ಹಾಗೂ ಶಿರಸ್ತೇದಾರ್‌ರವರ ದೂರವಾಣಿ ಸಂಖ್ಯೆ ೦೮೨೭೪-೨೪೯೭೦೦ ಇದಾಗಿದೆ.