ಸಿದ್ದಾಪುರ, ಜೂ. ೫: ಲಾಕ್ಡೌನ್ ಹಿನ್ನೆಲೆ ಮಣ್ಣಿನಲ್ಲಿ ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುಂಬಾರ ಕುಟುಂಬ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ತಲೆತಲಾಂತರ ಗಳಿಂದ ಮನೆಯಲ್ಲಿಯೇ ಮಣ್ಣಿನಿಂದ ತಯಾರಿಸಿದ ಮಡಿಕೆ ಗಳನ್ನು ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿರುವ ಕುಂಬಾರರು ಇದೀಗ ಲಾಕ್ಡೌನ್ ನಿಂದಾಗಿ ಮಡಿಕೆಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲದೇ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.
ನೆಲ್ಲಿಹುದಿಕೇರಿ ಗ್ರಾಮದ ಕುಂಬಾರಗುAಡಿಯಲ್ಲಿ ಕಳೆದ ೫೦ ವರ್ಷಗಳಿಂದ ತಮ್ಮ ಮನೆಗಳಲ್ಲಿಯೇ ಮಣ್ಣಿನ ಮಡಿಕೆಗಳನ್ನು ತಯಾರಿಸಿ ಅವುಗಳನ್ನು ತಲೆಯಲ್ಲಿ ಹೊತ್ತುಕೊಂಡು ಹೋಗಿ ಮನೆ ಮನೆಗಳಿಗೆ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಕುಟುಂಬಗಳು ಇದೀಗ ಸಮಸ್ಯೆಗೆ ಸಿಲುಕಿಕೊಂಡಿವೆ. ಹಿಂದಿನ ಕಾಲದ ಜನರು ಮಣ್ಣಿನಲ್ಲಿ ತಯಾರಿಸಿದ ಮಡಿಕೆಗಳನ್ನು ಅಡುಗೆ ಮಾಡಲು ಹಾಗೂ ನೀರು ಬಿಸಿ ಮಾಡಲು ಬಳಸುತ್ತಿದ್ದರು. ಸೌದೆ ಒಲೆಗಳಲ್ಲಿ ಮಡಿಕೆಗಳನ್ನು ಬಳಸಿ ರುಚಿಕರವಾದ ಮಾಂಸ, ಹಸಿಮೀನಿನ ಅಡುಗೆಗಳನ್ನು ತಯಾರಿಸುತ್ತಿದ್ದರು. ಇದಲ್ಲದೆ ತಮ್ಮ ಮನೆಗಳಲ್ಲಿ ಹೂಕುಂಡ ಗಳನ್ನು ಇಟ್ಟು ಸಿಂಗಾರಗೊಳಿಸಲು ಮಣ್ಣಿನ ಹೂಕುಂಡಗಳನ್ನು ಕಡಿಮೆ ದರಗಳಲ್ಲಿ ಪಡೆದುಕೊಳ್ಳುತ್ತಿದ್ದರು.
ಆದರೆ ಕಾಲಗಳು ಉರುಳಿದಂತೆ ಬಹುತೇಕ ಮಂದಿ ಮಣ್ಣಿನ ಮಡಿಕೆ ಗಳಿಂದ ದೂರವಾದರು. ಆದರೂ ಕೂಡ ಹಿಂದಿನ ಕಾಲದ ವೃದ್ಧೆಯರು ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ, ಕುಗ್ರಾಮಗಳಲ್ಲಿ ಮಣ್ಣಿನ ಮಡಿಕೆಗಳನ್ನು ಆಹಾರ ತಯಾರಿಸಲು ಬಳಸುತ್ತಿದ್ದಾರೆ. ಆದರೆ ಲಾಕ್ಡೌನ್ನಿಂದಾಗಿ ಮಡಿಕೆಗಳನ್ನು ತೆಗೆದುಕೊಂಡು ಹೋಗಿ ವ್ಯಾಪಾರ ಮಾಡಲು ಸಮಸ್ಯೆಯಾಗಿದೆ ಎಂದು ಮಡಿಕೆ ತಯಾರಿಸಿ ಮಾರಾಟ ಮಾಡುತ್ತಿರುವ ರಾಜ ಹೇಳುತ್ತಾರೆ. ಮಡಿಕೆ ತಯಾರಿಸಿ ಅವುಗಳನ್ನು ಸೌದೆಯಿಂದ ಸುಟ್ಟು ಮಾರಾಟ ಮಾಡಲಾಗುತ್ತದೆ. ಆದರೆ, ಸೌದೆಯ ಬೆಲೆ ಕೂಡ ಗಗನಕ್ಕೇರಿದೆ. ಕೆಲಸ ಮಾಡಿದ ಸಂಬಳ ಕೂಡ ಲಭಿಸುವಲ್ಲಿ ಸಮಸ್ಯೆಯಾಗಿದೆ ಎಂದರು. ಅಂಗಡಿಯವರು ಕೂಡ ಲಾಕ್ಡೌನ್ನಿಂದಾಗಿ ಅಂಗಡಿಗಳಲ್ಲಿ ವ್ಯಾಪಾರ ಕುಂಠಿತಗೊAಡಿದ್ದರಿAದ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆಂದು ರಾಜ ತಮ್ಮ ಅಳಲು ತೋಡಿಕೊಂಡಿದ್ದಾರೆ.
- ಎ.ಎನ್. ವಾಸು.