ಕೂಡಿಗೆ, ಜೂ. ೫: ತೊರೆನೂರು ಗ್ರಾಮದಲ್ಲಿರುವ ಪಶುಪಾಲನೆ ಇಲಾಖೆಯ ಪಶು ಚಿಕಿತ್ಸಾಲಯದಲ್ಲಿ ಸೋಮವಾರಪೇಟೆ ತಾಲೂಕು ಪಶು ವೈದ್ಯಕೀಯ ತಂಡ ಮತ್ತು ತೊರೆನೂರು ಪಶು ಚಿಕಿತ್ಸಾಲಯದ ತಂಡ ಕಾಲು ಬಾಯಿ ಜ್ವರ ಕಾಣಿಸಿಕೊಂಡಿರುವ ಹಸುಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

ತೊರೆನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಈ ವ್ಯಾಪ್ತಿಯಲ್ಲಿ ಹಸುಗಳಿಗೆ ಕಾಲು ಬಾಯಿ ಜ್ವರ ಬಂದಿರುವ ಬಗ್ಗೆ ಮತ್ತು ಪಶು ಚಿಕಿತ್ಸಾಲಯಕ್ಕೆ ಖಾಯಂ ಪಶು ವೈದ್ಯರನ್ನು ನೇಮಕಾತಿ ಮಾಡುವಂತೆ ಗ್ರಾಮ ಪ್ರಮುಖರಾದ ಟಿ.ಎಸ್. ಜಗದೀಶ್, ಪುಟ್ಟಸ್ವಾಮಿ ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಮಾಜಿ ಅಧ್ಯಕ್ಷ ದೇವರಾಜ್, ಸೋಮಶೇಖರ್, ಗಣೇಶ್ ಅವರು ಮನವಿಯನ್ನು ಮಾಡಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರಿಗೆ ಮತ್ತು ತಾಲೂಕು ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ತೊರೆನೂರು ಗ್ರಾಮಕ್ಕೆ ತಕ್ಷಣವೇ ಭೇಟಿ ನೀಡಿ, ಆ ವ್ಯಾಪ್ತಿಯ ಮತ್ತು ಅಕ್ಕಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಹಸುಗಳಿಗೆ ಇರುವ ಕಾಯಿಲೆಯ ಪರೀಕ್ಷಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದರು. ಜಿಲ್ಲಾ ಪಶುಪಾಲನೆ ಅಧಿಕಾರಿಗಳ ತಂಡದ ಸದಸ್ಯರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಸುಗಳಿಗೆ ಕಾಣಿಸಿಕೊಂಡಿದ್ದ ರೋಗಗಳಿಗೆ ಚಿಕಿತ್ಸೆ ನೀಡಿದರು. ಅಲ್ಲದೆ ಹಸುಗಳ ಹೆಚ್ಚುವರಿ ರೋಗದ ತಪಾಸಣೆಗೆ ಮೈಸೂರಿನ ಪಶು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಾ. ಶಿವು ಬಾದಾಮಿ ತಿಳಿಸಿದ್ದಾರೆ.

ಜಿಲ್ಲಾ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ. ಸುರೇಶ್ ಭಟ್ಟ, ಸೋಮವಾರಪೇಟೆ ತಾಲೂಕು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಿವು ಬಾದಾಮಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಹಸುಗಳಿಗೆ ಚಿಕಿತ್ಸೆ ನೀಡಿದ್ದಾರೆ.