ಮಡಿಕೇರಿ, ಜೂ. ೫: ಬೆಂಗಳೂರಿನ ಬೊಮ್ಮಸಂದ್ರ ಜಿಗನಿ ಲಿಂಕ್ ರೋಡ್ ಕೈಗಾರಿಕಾ ಸಂಘ (ಬಿಜೆಎಲ್ಆರ್) ವತಿಯಿಂದ ೨೫೦ ವೈದ್ಯಕೀಯ ಕಿಟ್ಗಳನ್ನು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಅಚ್ಚಪಂಡ ಪ್ರಸಾದ್ ಅವರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮೂಲಕ ಸಾರ್ವಜನಿಕರಿಗೆ ವಿತರಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಮನವಿ ಮೇರೆಗೆ ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಲ್ಸ್ ಆಕ್ಸಿಮೀಟರ್, ಔಷಧಿ ಒಳಗೊಂಡ ವೈದ್ಯಕೀಯ ಕಿಟ್ನ್ನು ನಗರದ ಜಿಲ್ಲಾ ಡಳಿತ ಭವನದಲ್ಲಿ ವಿತರಿಸಲಾಯಿತು.
ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು, ಬಡ ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿವೆ. ಆ ನಿಟ್ಟಿನಲ್ಲಿ ಇಂತಹ ವೈದ್ಯಕೀಯ ಕಿಟ್ ಬಳಸಿಕೊಂಡು ಆರೋಗ್ಯದತ್ತ ಹೆಚ್ಚಿನ ಗಮನಹರಿಸುವಂತಾಗಬೇಕು.
ಮುಂದಿನ ದಿನಗಳಲ್ಲಿಯೂ ಸಹ ಸರ್ಕಾರೇತರ ಸಂಸ್ಥೆಗಳು ಜಿಲ್ಲಾಡಳಿತದ ಜೊತೆ ಕೈಜೋಡಿಸಿ ತಮ್ಮ ಕೈಲಾದಷ್ಟು ಸಹಾಯ ಮಾಡಲಿವೆ ಎಂದು ಸುನಿಲ್ ಸುಬ್ರಮಣಿ ಅವರು ಹೇಳಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಗೃಹ ಸಂಪರ್ಕ ತಡೆಯಲ್ಲಿರುವವರಿಗೆ ವೈದ್ಯಕೀಯ ಕಿಟ್ ಬಹು ಉಪಯುಕ್ತ ವಾಗಿದೆ. ಜಿಲ್ಲೆಯಲ್ಲಿ ಕೋವಿಡ್-೧೯ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದೆ. ಆದರೂ ಕೋವಿಡ್ ೧೯ ನಿಯಂತ್ರಣಕ್ಕೆ ಇನ್ನಷ್ಟು ಪ್ರಯತ್ನ ಮುಂದುವರೆಸ ಬೇಕಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬೊಮ್ಮಸಂದ್ರ ಕೈಗಾರಿಕಾ ಸಂಘ ಹಾಗೂ ಕೈಗಾರಿಕೊದ್ಯಮಿಗಳ ಸಂಘ ವತಿಯಿಂದ ಸಿಎಸ್ಆರ್ ನಿಧಿಯಿಂದ ತಲಾ ೩ ಸಾವಿರ
ರೂ. ಮೌಲ್ಯದ ೨೫೦ ವೈದ್ಯಕೀಯ ಕಿಟ್ನ್ನು ವಿತರಿಸ ಲಾಗುತ್ತಿದೆ ಎಂದು ಪ್ರಸಾದ್ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ನೋಡಲ್ ಅಧಿಕಾರಿ ಅನಿಲ್ ಬಗಟಿ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಪ್ರಮುಖರಾದ ಅಚ್ಚಪಂಡ ಮಿಥುನ್, ತಾಪಂಡ ಸೋಮಯ್ಯ, ಜಂಟಿ ಕಾರ್ಯದರ್ಶಿ ಮುರಳಿಧರ, ಬಿಐಎ ನ ಉಳುವಾರ ರಾಜು, ಕಾಂಗೀರ ಸತೀಶ್, ಕಿರಣ್ ಕುಮಾರ್, ಗೋಪಾಲ್ ಸಿಂಗ್, ರಾಜಣ್ಣ ಬಯೋಕಾನ್, ಬೀರಪ್ಪ, ಮನು ಮಂಜುನಾಥ್ ಇತರರು ಇದ್ದರು.