ಸಿದ್ದಾಪುರ, ಜೂ. ೪: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿದ್ದರೂ ಕೂಡ ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಡಿ ಹಾಗೂ ತ್ಯಾಗತ್ತೂರು ಹಾಡಿಗಳು ಕೊರೊನಾ ಮುಕ್ತ ಗ್ರಾಮವಾಗಿಯೆಂದು ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ಅನಿಲ್ಕುಮಾರ್ ಮಾಹಿತಿ ನೀಡಿದ್ದಾರೆ.
ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಕೊರೊನಾ ವೈರಸ್ ಆಗ್ಗಿಂದಾಗೆ ಪ್ರಕರಣಗಳು ಕಂಡು ಬರುತ್ತಿತ್ತು. ಆದರೆ ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಗೂ ತ್ಯಾಗತ್ತೂರು ಗ್ರಾಮದ ಹಾಡಿಗಳಲ್ಲಿ ಆದಿವಾಸಿಗಳು ಹೆಚ್ಚಾಗಿ ವಾಸ ಮಾಡಿಕೊಂಡಿದ್ದಾರೆ. ಇಲ್ಲಿ ವಾಸ ಮಾಡಿಕೊಂಡಿರುವ ಆದಿವಾಸಿಗಳು, ಕೂಲಿ ಕಾರ್ಮಿಕರಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆಂದು ಹೊರಗಡೆ ಹೋಗುತ್ತಾರೆ.
ಆದರೆ ಕೊರೊನಾ ವೈರಸ್ ಬಗ್ಗೆ ಎಚ್ಚರ ವಹಿಸುತ್ತಾ ತಮ್ಮ ಹಾಡಿಗಳಿಗೆ ಹಾಗೂ ಊರುಗಳಿಗೆ ಕೊರೊನಾ ವೈರಸ್ ನುಸುಳದಂತೆ ಎಚ್ಚರ ವಹಿಸಿರುವ ಹಿನ್ನೆಲೆಯಲ್ಲಿ ಈ ಎರಡು ಗ್ರಾಮಗಳ ಹಾಡಿಗಳು ಕೊರೊನಾ ಮುಕ್ತ ಗ್ರಾಮಗಳಾಗಿವೆ.
ಮಹಾಮಾರಿ ಕೊರೊನಾದ ಹಾವಳಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿನ ಮಂದಿ ಮಾಸ್ಕ್ ಧರಿಸುತ್ತ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುತ್ತಮುತ್ತಲಿನ ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳುತ್ತಾರೆ. ಇದೇ ರೀತಿ ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಮುಕ್ತ ಮಾಡಲು ಪಂಚಾಯಿತಿಯ ಮೂಲಕ ಶ್ರಮವಹಿಸಲಾಗುವದೆಂದು ಅನಿಲ್ಕುಮಾರ್ ತಿಳಿಸಿದರು. ಈಗಾಗಲೇ ಪಂಚಾಯಿತಿಯ ವ್ಯಾಪ್ತಿಯಲ್ಲಿ ಟಾಸ್ಕ್ಪೋರ್ಸ್ ಸಮಿತಿಯ ಮೂಲಕ ಕೊರೊನಾದ ಬಗ್ಗೆ ಎಚ್ಚರ ವಹಿಸುವಂತೆ ಅರಿವು ಮೂಡಿಸಲಾಗಿದೆಯೆಂದರು.
ಗ್ರಾಮಸ್ಥರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಗ್ರಾಮಸ್ಥರು ಕೊರೊನಾ ಮುಕ್ತ ಮಾಡಲು ಪಂಚಾಯಿತಿಯೊAದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಪಂಚಾಯಿತಿ ಅಧ್ಯಕ್ಷೆ ಅನಿತಾರವರು ಕೊರೊನಾ ಮುಕ್ತ ಗ್ರಾಮ ಮಾಡಲು ಸದಸ್ಯರೊಂದಿಗೆ ಸೇರಿ ಶ್ರಮವಹಿಸುತ್ತ ಸಹಕರಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
- ವಾಸು