ಕೂಡಿಗೆ, ಜೂ. ೪: ವಿಶ್ವ ಹಾಲು ದಿನದ ಅಂಗವಾಗಿ ಹಾಸನ ಹಾಲು ಒಕ್ಕೂಟದ ಆಡಳಿತದ ಮಂಡಳಿಗೆ ಒಳಪಟ್ಟಿರುವ ಕೂಡಿಗೆಯ ಡೈರಿ ವತಿಯಿಂದ ಜಿಲ್ಲೆಯ ಗ್ರಾಹಕರಿಗೆ ಒಂದು ಲೀಟರ್ ಹಾಲಿನ ಜೊತೆಯಲ್ಲಿ ೪೦ ಎಂ.ಎಲ್. ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲೆಯ ನಿರ್ದೇಶಕ ಕೆ.ಕೆ. ಹೇಮಂತ್ಕುಮಾರ್ ತಿಳಿಸಿದ್ದಾರೆ.
ಕೂಡಿಗೆ ಡೈರಿಯಲ್ಲಿ ನಡೆದ ಸರಳ ವಿಶ್ವ ಹಾಲು ದಿನ ಕಾರ್ಯಕ್ರಮದಲ್ಲಿ ತಿಳಿಸಿದರು. ಕೂಡಿಗೆ ಡೈರಿ ವತಿಯಿಂದ ಜಿಲ್ಲೆಯ ಹಾಲಿನ ಎಲ್ಲಾ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಗೂ ಹಾಲಿನ ಎಲ್ಲಾ ಉತ್ಪನ್ನಗಳನ್ನು ಸರಿಯಾದ ಸಮಯಕ್ಕೆ ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಕೆ.ಎಂ.ಎಫ್. ತೀರ್ಮಾನದಂತೆ ಹಾಸನ ಹಾಲು ಒಕ್ಕೂಟಕ್ಕೆ ಒಳಪಡುವ ಎಲ್ಲಾ ಜಿಲ್ಲೆಗಳಲ್ಲಿಯೂ ಹಾಲು ಕೊಳ್ಳುವ ಎಲ್ಲಾ ಗ್ರಾಹಕರಿಗೆ ಒಂದು ಲೀಟರ್ ಹಾಲಿನ ಪ್ಯಾಕೇಟ್ ಜೊತೆಗೆ ೪೦ ಎಂ.ಎಲ್. ಹಾಲು ಉಚಿತ, ಅರ್ಧ ಲೀಟರ್ ಹಾಲಿನ ಪ್ಯಾಕೇಟ್ನಲ್ಲಿ ೨೦ ಎಂ.ಎಲ್. ಹಾಲನ್ನು ಉಚಿತವಾಗಿ ಜೂನ್ ತಿಂಗಳಿಡಿ ಉಚಿತವಾಗಿ ನೀಡಲಾಗುವುದು ಎಂದು ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ತಿಳಿಸಿದ್ದಾರೆ.