ಬೆಂಗಳೂರು, ಜೂ. ೪: ಕೊರೊನಾ ಹಿನ್ನೆಲೆ ೧೨ನೇ ತರಗತಿಯ ಸಿಬಿಎಸ್ಇ, ಐಸಿಎಸ್ಇ ಪರೀಕ್ಷೆಗಳು ರದ್ದಾಗಿರುವುದಾಗಿ ಕೇಂದ್ರ ಸರಕಾರ ಘೋಷಿಸಿದ ಎರಡೇ ದಿನಗಳ ನಂತರ, ಇದೀಗ ರಾಜ್ಯ ಶಿಕ್ಷಣ ಇಲಾಖೆಗೆ ಒಳಪಡುವ ದ್ವಿತೀಯ ಪಿ.ಯು. ಪರೀಕ್ಷೆಯನ್ನೂ ರದ್ದು ಮಾಡಲಾಗಿದೆ. ೧೦ನೇ ತರಗತಿ ಪರೀಕ್ಷೆಗಳನ್ನು ಜುಲೈ ೩ನೇ ವಾರ ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಬAಧ ಬೆಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದರು. ದ್ವಿತೀಯ ಪಿ.ಯು.ಸಿ.ಯಲ್ಲಿ ವಿಜ್ಞಾನ, ಕಾಮರ್ಸ್, ಆರ್ಟ್ಸ್ ಸೇರಿದಂತೆ ಹಲವಾರು ವಿಷಯಗಳಿದ್ದು ಒಂದು ವೇಳೆ ಪರೀಕ್ಷೆ ನಡೆಸಬೇಕಾದರೆ ಕನಿಷ್ಟ ೧೨ ದಿನಗಳ ಕಾಲಾವಕಾಶ ಬೇಕಿದೆ. ಸದ್ಯದ ಕೋವಿಡ್ ಪರಿಸ್ಥಿತಿಯ ನಡುವೆ ಅದು ಅಸಾಧ್ಯವಾಗಿರುವ
ಹಿನ್ನೆಲೆ ಪರೀಕ್ಷೆ ಇಲ್ಲದೆಯೇ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ ಎಂದು ಹೇಳಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳ ಶಿಕ್ಷಣ ಅಧಿಕಾರಿಗಳು, ಮಕ್ಕಳು, ಶಿಕ್ಷಣ ತಜ್ಞರ ಅಭಿಪ್ರಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಪ್ರಥಮ ಪಿ.ಯು.ಸಿ. ಆಧಾರದ ಮೇರೆಗೆ ಗ್ರೇಡಿಂಗ್
ಕಳೆದ ವರ್ಷ ಜಿಲ್ಲಾ ಮಟ್ಟದಲ್ಲಿ ಪ್ರಥಮ ಪಿ.ಯು ಪರೀಕ್ಷೆ ನಡೆದಿದ್ದು ಇದರಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಿ-ಅAಶಗಳ ಆಧಾರದ ಮೇರೆ ಹಾಗೂ ಶಿಕ್ಷಣ ಮಂಡಳಿಯ ಕೆಲವು ಮಾನದಂಡಗಳನ್ವಯ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ‘ಂ+,A,ಃ,ಅ’ ಇತ್ಯಾದಿ ಗ್ರೇಡ್ಗಳನ್ನು ನೀಡಲಾಗುತ್ತದೆ. ಮಾನದಂಡಗಳ ಕುರಿತ ಮಾರ್ಗಸೂಚಿ ಶೀಘ್ರದಲ್ಲೇ
(ಮೊದಲ ಪುಟದಿಂದ) ಬಿಡುಗಡೆಯಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅಸಮಾಧಾನವಿದ್ದಲ್ಲಿ ಪರೀಕ್ಷೆ ಬರೆಯಬಹುದು
ಪ್ರಥಮ ಪಿ.ಯು. ಅಂಕಿ-ಅAಶ ಆಧಾರಿತ ಗ್ರೇಡ್ ದೊರೆತ ಬಳಿಕ ವಿದ್ಯಾರ್ಥಿಗಳಿಗೆ ದೊರೆತ ಗ್ರೇಡ್ನಲ್ಲಿ ಅಸಮಾಧಾನವಿದ್ದರೆ, ಅವರು ಪರೀಕ್ಷೆ ಬರೆದಿದ್ದರೆ ಇನ್ನೂ ಹೆಚ್ಚು ಅಂಕ ಪಡೆಯಬಹುದಿತ್ತು ಎಂಬ ವಿಶ್ವಾಸವಿದ್ದಲ್ಲಿ, ಅಂತಹ ವಿದ್ಯಾರ್ಥಿಗಳು ಕೋವಿಡ್ ಹತೋಟಿಗೆ ಬಂದ ನಂತರ ಪರೀಕ್ಷೆ ಬರೆಯಬಹುದಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ಜೆಇಇ, ಎನ್ಇಇಟಿ, ಐಐಟಿ ಗಳಿಗೆ ಹಲವು ವರ್ಷಗಳಿಂದಲೇ ಕೆಲವು ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದು, ಅಂತವರು ಧೃತಿಗೆಡದೆ ಈ ಪರೀಕ್ಷೆಗಳ ತಯಾರಿಯನ್ನು ಮುಂದುವರಿಸಬೇಕು. ಈ ಪರೀಕ್ಷೆಗಳಲ್ಲಿ ಒಳ್ಳೆಯ ರ್ಯಾಂಕ್ ಪಡೆದು ಸಂಬAಧಿಸಿದ ಇಂಜಿನಿಯರ್, ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಸುರೇಶ್ ಕುಮಾರ್ ಹೇಳಿದರು.
ಜುಲೈ ೩ನೇ ವಾರದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ
ಶಿಕ್ಷಣ ತಜ್ಞರು, ಡಿಡಿಪಿಐ, ಪೋಷಕರು, ಮಕ್ಕಳು ಎಲ್ಲರೊಂದಿಗೂ ಚರ್ಚಿಸಿದ ನಂತರ ೧೦ನೇ ತರಗತಿ ಪರೀಕ್ಷೆಗಳು ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಉತ್ಸಾಹ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳೊAದಿಗೆ ಈ ಬಗ್ಗೆ ಚರ್ಚೆ ಕೂಡ ನಡೆಸಿದ್ದು ಜುಲೈ ೩ನೇ ವಾರದಲ್ಲಿ ೧೦ನೇ ತರಗತಿ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿಲಾಗಿದೆ. ಕೇವಲ ಎರಡೇ ದಿನಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷಾ ದಿನವನ್ನು ಪರೀಕ್ಷೆ ಪ್ರಾರಂಭವಾಗುವ ೨೦ ದಿನಗಳ ಮುಂಚೆ ಪ್ರಕಟಮಾಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು. ರಾಜ್ಯದಲ್ಲಿ ೮.೭೫ ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆ ನಡೆಸುವುದು ಅನಿವಾರ್ಯ
ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ಗ್ರೇಡ್ ನೀಡುವಾಗ ಪ್ರಥಮ ಪಿ.ಯು ಫಲಿತಾಂಶಾಧಾರಿತ ನೀಡಬಹುದಾಗಿದೆ ಆದರೂ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಇದು ಅಸಾಧ್ಯ. ಕಳೆದ ವರ್ಷ ೯ನೇ ತರಗತಿ ಪರೀಕ್ಷೆಗಳೂ ರದ್ದಾದ ಕಾರಣ ಯಾವ ಆಧಾರದಲ್ಲಿಯೂ ೧೦ನೇ ತರಗತಿಯವರಿಗೆ ಗ್ರೇಡ್ ನೀಡಲು ಸಾಧ್ಯವಿಲ್ಲ. ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮದಲ್ಲಿ ವರ್ಷಪೂರ್ತಿ ‘ಕಂಟ್ಯುನಿಯಸ್ ಇವ್ಯಾಲ್ಯುಯೇಷನ್’ (ನಿರಂತರ ಮೌಲ್ಯಮಾಪನ) ಕ್ರಮ ಅನುಸರಿಸುವ ಕಾರಣ ಆ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡಬಹುದು. ಆದರೆ ರಾಜ್ಯ ಪಠ್ಯಕ್ರಮದಲ್ಲಿ ಈ ಸೌಲಭ್ಯ ಇಲ್ಲದ ಕಾರಣ ಪರೀಕ್ಷೆ ನಡೆಸುವ ಅನಿವಾರ್ಯತೆ ಇದೆ ಎಂದು ಅವರು ವಿವರಿಸಿದರು.
ಬಹು ಆಯ್ಕೆ ಪ್ರಶ್ನೆಗಳು - ಒಂದು ವಿಷಯಕ್ಕೆ ೪೦ ಅಂಕಗಳು
೧೦ನೇ ತರಗತಿ ಪರೀಕ್ಷೆಯನ್ನು ಕೇವಲ ೨ ದಿನಗಳಲ್ಲಿ ಮುಗಿಸಲಾಗುತ್ತದೆ. ಮುಖ್ಯ ವಿಷಯಗಳಾದ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಗಳನ್ನು ಸೇರಿಸಿ ಒಂದು ಪರೀಕ್ಷೆ ಮಾಡಲಾಗುತ್ತದೆ. ಪ್ರಥಮ ಭಾಷೆ, ದ್ವಿತೀಯ ಹಾಗೂ ತೃತೀಯ ಭಾಷೆಗಳನ್ನು ಸೇರಿಸಿ ಮತ್ತೊಂದು ಪರೀಕ್ಷೆ ಮಾಡಲಾಗುತ್ತದೆ. ಒಂದು ಪರೀಕ್ಷೆಯಲ್ಲಿ ೩ ವಿಷಯಗಳಿದ್ದು, ಪ್ರತೀ ವಿಷಯದ ಗರಿಷ್ಠ ಅಂಕ ೪೦ ಆಗಿರುತ್ತದೆ. ೩ ವಿಷಯಗಳು ಸೇರಿದರೆ ಒಟ್ಟು ಒಂದು ಪರೀಕ್ಷೆಗೆ ಗರಿಷ್ಠ ೧೨೦ ಅಂಕಗಳಿದ್ದು, ೩ ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆಗಳು ಸುಲಭ ಹಾಗೂ ನೇರವಾಗಿರುತ್ತವೆ. ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ನಮಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವ ಯಾವ ಉದ್ದೇಶವೂ ಇಲ್ಲ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತಾವೇ ಪರೀಕ್ಷಿಸಿ ಮುಂದಿನ ಶಿಕ್ಷಣದ ಬಗ್ಗೆ ನಿರ್ಧಾರ ಕೈಗೊಳ್ಳಲು ಈ ಪರೀಕ್ಷೆ ಸಹಾಯವಾಗಲಿದೆ ಎಂದರು. ವಿದ್ಯಾರ್ಥಿಗಳಿಗೆ ಗ್ರೇಡ್ ಮೂಲಕ ಫಲಿತಾಂಶ ನೀಡಲಾಗುತ್ತದೆ. ಎರಡು ಪರೀಕ್ಷೆಗಳ ನಡುವೆ ೩ ದಿನಗಳ ಅಂತರ ನೀಡಲಾಗುವುದಾಗಿ ಸುರೇಶ್ ಕುಮಾರ್ ತಿಳಿಸಿದರು.
ಕೋವಿಡ್ ಇದ್ದರೆ ಪುನಃ ಅವಕಾಶ
ಪರೀಕ್ಷೆ ಘೋಷಣೆಯಾದ ದಿನ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಇದ್ದರೆ, ಮನೆಯವರಿಗೆ ಸೋಂಕು ತಗುಲಿದ್ದರೆ, ಒಟ್ಟಿನಲ್ಲಿ ಕೋವಿಡ್ ಸಂಬAಧ ಯಾವುದೇ ಸಮಸ್ಯೆಯಿಂದ ಪರೀಕ್ಷೆ ಬರೆಯಲು ಅಸಾಧ್ಯವಾದಲ್ಲಿ, ಅಂತವರಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ಬರೆಯಲು ಪುನ ಅವಕಾಶ ಕಲ್ಪಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಪರೀಕ್ಷೆಯನ್ನು ‘ಮೊದಲನೆಯ ಪ್ರಯತ್ನ’ ಎಂದೇ ಪರಿಗಣಿಸಲಾಗುವುದು.
೬,೦೦೦ ಕೇಂದ್ರಗಳು
ಕಳೆದ ವರ್ಷ ೩,೦೦೦ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ೬,೦೦೦ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಕಳೆದ ವರ್ಷ ಪ್ರತಿ ಕೊಠಡಿಯಲ್ಲಿ ೧೮-೨೦ ವಿದ್ಯಾರ್ಥಿಗಳು ಇದ್ದರು. ಈ ಬಾರಿ ೧೦-೧೨ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ರಜೆ ಇರುವ ಕಾರಣ ಹಾಸ್ಟೆಲ್ನಿಂದ ತಮ್ಮ ಸ್ವಂತ ಮನೆಗಳಿಗೆ ತೆರಳಿದ್ದಾರೆ. ಈ ಕಾರಣದಿಂದಾಗಿ ತಮ್ಮ ವಸತಿ ಸಮೀಪವಿರುವ ಪರೀಕ್ಷಾ ಕೇಂದ್ರವನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ಸೌಲಭ್ಯ ನೀಡಲಾಗುತ್ತದೆ. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರು, ಸಿಬ್ಬಂದಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಎನ್-೯೫ ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.
೧೦ನೇ ತರಗತಿ ಫಲಿತಾಂಶ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲನೆಯ ವಾರ ಪ್ರಕಟಿಸಲಾಗುತ್ತದೆ. ದ್ವಿತೀಯ ಪಿ.ಯು ಫಲಿತಾಂಶವನ್ನು ಜೂನ್ ೨೫ ರ ನಂತರ ಪ್ರಕಟಿಸಲಾಗುತ್ತದೆ.