ವೀರಾಜಪೇಟೆ, ಜೂ. ೨: ಕಳೆದ ಎರಡೂವರೆ ತಿಂಗಳ ಹಿಂದೆ ಹಸುವನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ಪಾಲಿಬೆಟ್ಟದ ಊರುಗುಪ್ಪೆ ನಿವಾಸಿ ಮುಜೀಬ್ (೩೨) ಎಂಬಾತನನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಇಲ್ಲಿನ ಸಮುಚ್ಚಯ ನ್ಯಾಯಾಲಯದ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.(ಮೊದಲ ಪುಟದಿಂದ) ಕಾಕೋಟುಪರಂಬು ಗ್ರಾಮದ ಸಿ.ಅಪ್ಪಚ್ಚು ಎಂಬವರಿಗೆ ಸೇರಿದ ಸುಮಾರು ೩೦,೦೦೦ ಬೆಲೆ ಬಾಳುವ ಹಸುವನ್ನು ಕಳವು ಮಾಡಲಾಗಿತ್ತು. ಗ್ರಾಮಾಂತರ ಪೊಲೀಸರಿಗೆ ಅಪ್ಪಚ್ಚು ಅವರು ೨೦-೩-೨೧ ರಂದು ದೂರು ನೀಡಿದ ಮೇರೆ ಕಳವು ಪ್ರಕರಣ ದಾಖಲಿಸಲಾಗಿತ್ತು.

ತಾ.೩೧ ರಂದು ಪಾಲಿಬೆಟ್ಟದಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಅಸೆಂಟ್ ಕಾರನ್ನು ನಂ. (ಕೆ.ಎ.೦೨ ಝೆಡ್-೪೩೪೬) ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ಹಸು ಕಳವು ಮಾಡಿದನ್ನು ಕಾರಿನಲ್ಲಿದ್ದ ಮುಜೀಬ್ ಒಪ್ಪಿಕೊಂಡಿದ್ದಾರೆ. ಜೊತೆಗೆ ಇನ್ನೂ ಇಬ್ಬರು ಆರೋಪಿಗಳಿದ್ದು ಉಬೈದು ಎಂಬಾತನು ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಅವರುಗಳ ವಿಳಾಸವನ್ನು ಆತ ಪೊಲೀಸರಿಗೆ ನೀಡಿದ್ದಾನೆ. ಪೊಲೀಸರು ಇನ್ನೂ ೨ ಮಂದಿಯ ಶೋಧನೆಯಲ್ಲಿ ತೊಡಗಿದ್ದಾರೆ.