ಕೂಡಿಗೆ, ಜೂ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ. ಬಸವನತ್ತೂರು ಗ್ರಾಮ ಆನೆಕೆರೆ ಸಮೀಪ ನಿವಾಸಿ ವ್ಯಯ ರಾಜಣ್ಣ ಕಳೆದ ೨೦ ವರ್ಷಗಳಿಂದಲೂ ಸಣ್ಣ ಗುಡಿಸಲಿನ ಮಾದರಿಯ ಮನೆಯಲ್ಲಿ ವಾಸವಿದ್ದು, ಇಂದು ಗಾಳಿ ಮಳೆಯಿಂದಾಗಿ ಈ ಮನೆಯ ಗೋಡೆಯ ಕಂಬಗಳು ಕುಸಿತಗೊಂಡು ನೆಲಸಮಗೊಂಡಿದೆ.(ಮೊದಲ ಪುಟದಿಂದ) ರಾಜಣ್ಣ, ಪತ್ನಿ ನಾಗಮ್ಮ ಮತ್ತು ಪುತ್ರ ನಾಗೇಶ್ ಮಳೆ ಬರುವ ಸಂದರ್ಭದಲ್ಲಿ ಮನೆಯ ಒಳಗಡೆ ಇದ್ದು ಜೋರಾಗಿ ಗಾಳಿ ಬೀಸಿದ ಸಂದರ್ಭ ರಾಜಣ್ಣ ಮತ್ತು ನಾಗಮ್ಮ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಮಗ ನಾಗೇಶ ಹೊರಗೆ ಬರುವಷ್ಟರಲ್ಲಿ ಮನೆಯ ಗೋಡೆ ಕುಸಿತಗೊಂಡು ಹಂಚು ಮತ್ತು ಬಿದಿರು ಕಂಬಗಳು ಅವನ ಮೇಲೆ ಬಿದ್ದಿದೆ. ನಾಗಮ್ಮ ಕೂಗಿಕೊಂಡು ಪಕ್ಕದ ಮನೆಯವರಿಗೆ ತಿಳಿಸಿದ ತಕ್ಷಣವೇ ಸ್ಥಳೀಯರು ಅಲ್ಲಿಗೆ ಹೋಗಿ ನಾಗೇಶನನ್ನು ಹೊರಗೆ ಎಳೆದಿದ್ದಾರೆ. ನಾಗೇಶನಿಗೆ ಕೈ ಮತ್ತು ತಲೆಗೆ ಪೆಟ್ಟಾಗಿದೆ. ಸ್ಥಳೀಯರು ಗ್ರಾಮ ಪಂಚಾಯಿತಿ ತಿಳಿಸಿದ ಮೇರೆಗೆ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಭೇಟಿ ನೀಡಿ ಗಾಯವಾಗಿದ್ದ ನಾಗೇಶ್‌ನನ್ನು ಕುಶಾಲನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೀರಾ ಕಡುಬಡವರಾಗಿರುವ ರಾಜಣ್ಣನವರ ಕುಟುಂಬಕ್ಕೆ ಬೇರೆ ಸ್ಥಳದ ವ್ಯವಸ್ಥೆ ಮಾಡಿ ಊಟ ಮತ್ತು ಮಲಗುವ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸ್ಥಳೀಯರು ಮಾಡಿದ್ದಾರೆ. ಶಾಸಕರ ಗಮನಕ್ಕೆ ತಂದು ತಕ್ಷಣವೇ ಮನೆ ನಿರ್ಮಾಣ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಅಧ್ಯಕ್ಷೆ ಇಂದಿರಾ ರಮೇಶ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮೂಡ್ಲಿಗೌಡ, ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಗ್ರಾಮ ಪ್ರಮುಖರಾದ ವರದರಾಜ್ ದಾಸ್, ಸಂತೋಷ್, ಸಹದೇವ ಇನ್ನಿತರರು ಇದ್ದರು.