ಮಡಿಕೇರಿ, ಜೂ. ೨: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಇಂದು ಬೆಳಿಗ್ಗೆ ಕಾಡಾನೆ ದಾಳಿಗೆ ಸಿಲುಕಿ ಕೊಡಗು ಜಿಲ್ಲೆಯ ಮೂಲದವರಾದ ಬೆಳೆಗಾರರೊಬ್ಬರು ದುರ್ಮರಣಗೊಂಡಿದ್ದಾರೆ. ಕೊಳಕೇರಿ ಗ್ರಾಮಕ್ಕೆ ಸೇರಿದವರಾದ ಕಲಿಯಂಡ ಬಿದ್ದಯ್ಯ (ರಾಜು-೭೪) ಅವರು ಇಳಿವಯಸ್ಸಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಅಸುನೀಗಿದ್ದಾರೆ. ಸಕಲೇಶಪುರದಲ್ಲಿ ಕಾಫಿ ತೋಟ ಹೊಂದಿರುವ ಇವರು ಕಳೆದ ಹಲವು ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದರು.ಇಂದು ಬೆಳಿಗ್ಗೆ ಅವರು ಮನೆಯ ಸನಿಹದಲ್ಲೇ ಇದ್ದ ಸಂದರ್ಭ ಆಗಮಿಸಿದ ಕಾಡಾನೆಮೊದಲ ಪುಟದಿಂದ) ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಬಿದ್ದಯ್ಯ ಅವರು ಸ್ಥಳದಲ್ಲೇ ದುರ್ಮರಣ ಗೊಂಡಿದ್ದಾರೆ. ದಾಳಿಗೆ ಸಿಲುಕಿ ಇವರ ತಲೆಭಾಗ ಸೇರಿದಂತೆ ದೇಹದ ಹಲವಾರು ಭಾಗ ಜರ್ಜರಿತವಾಗಿದೆ. ಮೃತರು ಸಕಲೇಶಪುರದಲ್ಲಿ ಅದೋಳಿ ಎಸ್ಟೇಟ್ ಎಂಬ ತೋಟಹೊಂದಿದ್ದು, ಅಲ್ಲಿಯೇ ನೆಲೆಸಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ಸಕಲೇಶಪುರದಲ್ಲಿಯೇ ನೆರವೇರಿತು.