ಆಧುನಿಕ ಯುಗದ ಆವಿಷ್ಕಾರ ಗಳಿಂದ ಅತ್ಯಾಧುನಿಕ ತಂತ್ರಜ್ಞಾನಾ ಧಾರಿತ ಸಾಕಷ್ಟು ವಾಹನಗಳು ರಸ್ತೆಗೆ ಇಳಿದಿರುವ ಈ ಕಾಲಘಟ್ಟದಲ್ಲಿ ‘ಸೈಕಲ್ ದಿನಾಚರಣೆ' ಏನು ಮಹಾ ? ಎಂದು ನಾವು ಭ್ರಮಿಸಿಕೊಂಡರೆ ನಮಗಿಂತ ದೊಡ್ಡ ಮೂರ್ಖರು ಬೇರೆ ಯಾರೂ ಇರಲಾರರು. ತಂತ್ರಜ್ಞಾನ ಎಷ್ಟೇ ಆವಿಷ್ಕಾರಗೊಂಡರೂ ಸೈಕಲ್‌ಗೆ (ಬೈಸಿಕಲ್ ಎಂದೂ ಕರೆಯಲಾಗುತ್ತದೆ) ಪರ್ಯಾಯವಾದ ವಾಹನ ಬೇರೊಂದಿಲ್ಲ. ಸೈಕಲ್ಲಿಗೆ ಸೈಕಲೇ ಸರಿಸಾಟಿ. ಹಲವಾರು ವೈಶಿಷ್ಟತೆ ಯನ್ನು ಒಳಗೊಂಡು ಜನರಿಂದ ಎಂದಿಗೂ ಬೇರ್ಪಡದ ಸೈಕಲಿನ ಸ್ಮರಣೆ ಗಾಗಿ ಜೂನ್ ತಿಂಗಳ ೩ ರಂದು ‘ವಿಶ್ವ ಸೈಕಲ್ ದಿನಾಚರಣೆ' ಯನ್ನು ವಿವಿಧ ರೀತಿಯಲ್ಲಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ೨೦೧೮ ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೈಕಲ್‌ನ ಇತಿಹಾಸ ಮತ್ತು ಉಪಯೋಗದ ಕುರಿತು ಬೆಳಕು ಚೆಲ್ಲುವ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಹೊಟ್ಟೆ ತುಂಬಿಸುವ ಮತ್ತು ಹೊಟ್ಟೆ ಕರಗಿಸುವ ಸುಸ್ಥಿರ ಸಾರಿಗೆ: ಹಿಂದಿನ ಕಾಲದಲ್ಲಿ ಸೈಕಲ್ನಲ್ಲಿ ಶಾಲಾ-ಕಾಲೇಜುಗಳಿಗೆ ಬರುವುದೆಂದರೆ ಅದು ಪ್ರತಿಷ್ಠೆಯ ಮಾತಾಗಿತ್ತು. ಹಿಂದೆ ಮತ್ತು ಇಂದಿಗೂ ಹಲವಾರು ಶ್ರಮಿಕರ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಲ್ಪಟ್ಟ ಸೈಕಲ್ ಎಷ್ಟೋ ಜನರ ಹೊಟ್ಟೆ ತುಂಬಿಸಿದ್ದ ಮತ್ತು ತುಂಬಿಸುತ್ತಿರುವ ಸಾಧನ. ಆದರೆ ಕಾಲ ಬದಲಾದಂತೆ ಇದೇ ಸೈಕಲ್ ಇಂದು ‘ಹೊಟ್ಟೆ ಕರಗಿಸುವ' ಸಾಧನವಾಗಿಯೂ ಬಳಕೆಯಾಗು ತ್ತಿದೆ. ಇದು ಕೂಡ ಒಂದು ವಿಪರ್ಯಾಸವೇ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುö್ಯಎಚ್‌ಒ) ಪ್ರಕಾರ, ನಿರಂತರ ವಾಕಿಂಗ್ ಮತ್ತು ಸೈಕ್ಲಿಂಗ್ ಆರೋಗ್ಯ ವನ್ನು ಕಾಪಾಡಿಕೊಳ್ಳುವ ಒಂದು ಮಾರ್ಗವಾಗಿದೆ. ಸೈಕ್ಲಿಂಗ್‌ನಿAದ ಹೃದಯ ಕಾಯಿಲೆ, ಪಾರ್ಶ್ವವಾಯು, ಕೆಲವು ಕ್ಯಾನ್ಸರ್, ಮಧುಮೇಹ ಮತ್ತು ದಿಡೀರ್ ಸಾವಿನ ಅಪಾಯವನ್ನು ಕಡಿಮೆ ಮಾಡÀಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ, ಇದು ಅತ್ಯಂತ ಪರಿಸರ ಸ್ನೇಹಿ ಸಾರಿಗೆಯೂ ಹೌದು.

ಬಡವರ ಬೈಕ್: ಸೈಕಲನ್ನು ಎಂದೂ ನಿರ್ಲಕ್ಷಿಸುವಂತಿಲ್ಲ. ಈ ಸೈಕಲ್ ಅದೆಷ್ಟೋ ಜನರ ಪಾಲಿನ ಜೀವನ ಸಂಗಾತಿಯೂ ಹೌದು. ಉತ್ತರ ಭಾರತದಲ್ಲಿ ಸೇರಿದಂತೆ ನಮ್ಮ ದೇಶದ ವಿವಿಧೆಡೆ ಇಂದಿಗೂ ಈ ಸೈಕಲ್‌ನಿಂದಲೇ ಬದುಕು ಕಟ್ಟಿಕೊಳ್ಳುತ್ತಿರುವ ಅದೆಷ್ಟೋ ಮಂದಿ ಇದ್ದಾರೆ. ಹಿಂಬದಿಯಲ್ಲಿ ಜನರನ್ನು ಕೂರಿಸಿಕೊಂಡು ಹೊಟ್ಟೆಪಾಡಿಗಾಗಿ ಸೈಕಲ್ ರಿಕ್ಷಾ ತುಳಿಯುವ ವೃದ್ಧರನ್ನು ಕಂಡರೆ ಹೃದಯ ಕರಗದಿರದು. ಬಿಸಿಲು, ಚಳಿ, ಮಳೆಯ ಋತುಮಾನಗಳಲ್ಲೂ ಬಡವನಿಗೂ ಬಲಾಢ್ಯನಿಗೂ ಒಂದೇ ರೀತಿಯ ನೆರವು ನೀಡುವ ಸೈಕಲ್, ‘ತಾನು ಒದೆಸಿಕೊಂಡರು' ಆ ಮೂಲಕ ಇನ್ನೊಬ್ಬರಿಗೆ ನೆರವು ನೀಡುವ ಪರೋಪಕಾರಿ ವಾಹನವಾಗಿದೆ. ದೇಶದ ಹಲವಾರು ನಗರಗಳಲ್ಲಿ ಬಡ ನೌಕರರು ಇಂದಿಗೂ ಅವರ ಸಂಚಾರ ಸಾಧನವಾಗಿ ಬಳಸುವುದು ಸೈಕಲ್ ಅನ್ನು ಎಂಬುದು ಮರೆಯುವಂತಿಲ್ಲ. ಈ ಕಾರಣಕ್ಕಾಗಿಯೇ ಸೈಕಲ್ ಅನ್ನು ‘ಬಡವರ ಬೈಕ್' ಎಂದೂ ಕರೆಯಲಾಗು ತ್ತದೆ. ಬೈಸಿಕಲ್ ಎಂದರೆ ಜನರಿಗೆ ಮಾತ್ರವಲ್ಲದೆ ಪರಿಸರ ಮತ್ತು ಆರ್ಥಿಕತೆಗೆ ಸಹಕಾರಿಯಾಗುವ ಹೆಚ್ಚು ಸುಸ್ಥಿರ ಸಾರಿಗೆಯ ಸಂಕೇತವಾಗಿದೆ.

ಪ್ರತಿದಿನ ೩೦ರಿಂದ ೪೦ ಕಿ.ಮೀ. ದೂರ ಸೈಕಲ್‌ನಲ್ಲಿ ಸಂಚರಿಸುವ ಶ್ರಮಿಕರು ನಮ್ಮ ದೇಶದಲ್ಲಿದ್ದಾರೆ ಎಂದರೆ ಅದು ಆಶ್ಚರ್ಯವೇನಲ್ಲ. ಪಾಶ್ಚಾತ್ಯ ರಾಷ್ಟçಗಳಲ್ಲೂ ಸೈಕಲ್ ವಿಶಿಷ್ಟ ಸ್ಥಾನಮಾನವಿದೆ. ಕೆಲವು ರಾಷ್ಟçಗಳಲ್ಲಿ ಅಲ್ಲಿನ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಇಂದಿಗೂ ಸೈಕಲ್‌ನಲ್ಲಿ ಸಂಚರಿಸುವುದು ಸಾಮಾನ್ಯವಂತೆ. ಕಳೆದ ಕೆಲ ವರ್ಷಗಳವರೆಗೂ ಸೈಕಲನ್ನು ಬಾಡಿಗೆ ರೂಪದಲ್ಲಿ ಪಡೆದು ಅದನ್ನು ಬಳಸುವ ರೂಡಿ ಚಾಲ್ತಿಯಲ್ಲಿತ್ತು. ಕಳೆದ ೨೦ ವರ್ಷಗಳ ಹಿಂದೆ ಕೊಡಗಿನಲ್ಲಿಯೂ ಸೈಕಲನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದ್ದ ಪದ್ಧತಿ ಜಾರಿಯಲ್ಲಿತ್ತು. ಇದೀಗ ಸೈಕಲ್ ತಂತ್ರಜ್ಞಾನದಲ್ಲಿ ಹಲವಾರು ರೀತಿಯ ಆವಿಷ್ಕಾರಗಳು ಹೊರಬಂದು ಲಕ್ಷಾಂತರ ಮೌಲ್ಯದ ಸೈಕಲ್ಗಳು ಇಂದು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಇತ್ತೀಚೆಗೆ ರೂ. ೧೨ಲಕ್ಷ ಮೌಲ್ಯದ ಆಧುನಿಕ ಸೈಕಲ್‌ವೊಂದು ಮಂಗಳೂರಿನಲ್ಲಿ ಕಂಡುಬAದಿರುವುದಾಗಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸೈಕಲ್ ಯುಗದ ಉದಯ: ಸೈಕಲ್ಲುಗಳು ೧೯ನೆಯ ಶತಮಾನದಲ್ಲಿ ಯೂರೋಪ್ ಖಂಡದಲ್ಲಿ ಮೊದಲು ಬಳಕೆಗೆ ಬಂದವು. ನಂತರದ ಕೆಲ ವರ್ಷಗಳಲ್ಲಿ ಭಾರತದಲ್ಲಿಯೂ ‘ಸೈಕಲ್ ಯುಗ' ಆರಂಭವಾಯಿತು. ಈಗ ಪ್ರಪಂಚದಲ್ಲಿ ಒಟ್ಟು ೨೦೦ ಕೋಟಿಗೂ ಹೆಚ್ಚು ಸೈಕಲ್ಲುಗಳಿವೆ ಎಂದು ಅಂದಾಜು ಮಾಡಲಾಗಿದೆ. ಅನೇಕ ಪ್ರದೇಶಗಳಲ್ಲಿ ಸೈಕಲ್‌ಗಳನ್ನು ಸಂಚಾರ, ವ್ಯಾಪಾರ, ಸರಕು ಸಾಗಾಣೆ, ವ್ಯಾಯಾಮ, ಮನರಂಜನೆ, ಪ್ರವಾಸಗಳಿಗೆ (ಸೈಕಲ್ ಪರ್ವತಾರೋಹಣ, ಇತ್ಯಾದಿ) ಬಳಸಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಅಂಚೆ ರವಾನೆ ಮತ್ತು ಪೊಲೀಸ್, ಇನ್ನಿತರ ಅಗತ್ಯ ಸೇವೆಗಾಗಿಯೂ ಈ ಸೈಕಲ್‌ಗಳನ್ನು ಉಪಯೋಗಿಸಲಾಗುತ್ತದೆ. ಸೈಕಲುಗಳ ಮೂಲಭೂತ ಆಕಾರ ಮತ್ತು ರಚನೆ ೧೮೮೫ರಿಂದ ಮುಂದಕ್ಕೆ ಹೆಚ್ಚಾಗಿ ಬದಲಾಗಿಲ್ಲ. ಆದರೆ ಸೈಕಲ್ಲುಗಳನ್ನು ತಯಾರಿಸುವ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಹಾಗೆಯೇ ವಿವಿಧ ಉದ್ದೇಶ ಗಳಿಗಾಗಿ ವಿಶೇಷ ವಿನ್ಯಾಸದ ಸೈಕಲ್‌ಗಳ ತಯಾರಿಕೆ ಅವುಗಳ ಬೇಡಿಕೆಯ ಅನುಗುಣವಾಗಿ ನಡೆಯುತ್ತಿವೆ. ಸೈಕಲ್ಲುಗಳ ಆವಿಷ್ಕರಣಕ್ಕೆ ಮುಂಚೆಯೂ ಮಾನವಚಾಲಿತ ವಾಹನಗಳನ್ನು ನಿರ್ಮಿಸುವತ್ತ ಅನೇಕರು ಕೆಲಸ ಮಾಡಿದ್ದರು ಎಂಬುದರ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಉಲ್ಲೇಖಗಳಿವೆ. ೧೮೧೮ರಲ್ಲಿ ಬಳಕೆಗೆ ಬಂದ ‘ಡ್ರೆöÊಸೀನ್' ವಾಹನ ಸೈಕಲ್‌ಗಳ ಪೂರ್ವಜ ಎನ್ನಬಹುದು. ಎರಡು ಚಕ್ರಗಳನ್ನು ಹೊಂದಿದ್ದ (ಇದರಲ್ಲಿ ಪೆಡಲ್ ಅಥವಾ ಚೈನ್ ಇರಲಿಲ್ಲ) ಈ ವಾಹನದ ಮೇಲೆ ಕುಳಿತ ಸವಾರ ಕಾಲುಗಳಿಂದ ನೆಲವನ್ನು ತಳ್ಳುವುದರ ಮೂಲಕ ಇದನ್ನು ಚಾಲಿಸಬೇಕಾಗಿತ್ತು. ೧೮೬೦ರಲ್ಲಿ ‘ಪಿಯರಿ ಮಿಕಾ' ಮತ್ತು ‘ಪಿಯರಿ ಲಾಲೆಮೆಂಟ್' ಎಂಬ ಫ್ರೆಂಚ್ ಆವಿಷ್ಕರ್ತರು ಪೆಡಲ್ಲುಗಳನ್ನುಳ್ಳ ಸೈಕಲ್ ಒಂದನ್ನು ನಿರ್ಮಿಸಿದರು. ಇವುಗಳಲ್ಲಿ ಪೆಡಲ್‌ಗಳು ನೇರವಾಗಿ ಚಕ್ರಕ್ಕೆ ಸಂಪರ್ಕ ಹೊಂದಿರುತ್ತಿದ್ದವು. ಈಗಿನ ಸೈಕಲ್‌ಗಳಲ್ಲಿರುವಂತೆ ಪೆಡಲ್ ಮತ್ತು ಚಕ್ರವನ್ನು ಜೋಡಿಸುವ ಚೈನ್ ಅಂದು ಬಳಕೆಗೆ ಬಂದಿರಲಿಲ್ಲ. ಚೈನ್‌ಗಳುಳ್ಳ ಸೈಕಲ್ ಬಳಕೆಗೆ ಬಂದ ನಂತರ ೧೮೮೫ರಲ್ಲಿ ನಿರ್ಮಿಸಲಾದ ‘ರೋವರ್' ಸೈಕಲ್‌ಅನ್ನು ಆಧುನಿಕ ಸೈಕಲ್‌ಗಳ ಮೊದಲ ರೂಪ ಎಂದು ಗುರುತಿಸಬಹುದು. ೧೮೮೮ರಲ್ಲಿ ಗಾಳಿ ತುಂಬಿಸುವ ರಬ್ಬರ್ ಉತ್ಪನ್ನದ ಸೈಕಲ್ ಟೈರುಗಳು ಉಪಯೋಗಕ್ಕೆ ಬಂದವು. ಆ ನಂತರದ ವರ್ಷಗಳಲ್ಲಿ ಗೇರುಗಳನ್ನುಳ್ಳ ಸೈಕಲ್‌ಗಳ ಆವಿಷ್ಕರಣವೂ ನಡೆಯಿತು. ಇದು ಯುವ ಸಮೂಹವನ್ನು ಹೆಚ್ಚು ಆಕರ್ಷಿಸಿತು. ಅನೇಕ ಸೈಕಲ್ ರೇಸ್ ಮತ್ತು ಇತರ ಸ್ಪರ್ಧೆಗಳು ಜಗತ್ತಿನ ನಾನಾ ಕಡೆಗಳಲ್ಲಿ ನಡೆಯುತ್ತವೆ. ಈ ಪೈಕಿ ಪ್ರಸಿದ್ಧ ವಾದ ‘ಟೂರ್ ಡೀ ಫ್ರಾನ್ಸ್' ಎಂಬ ವಿಶ್ವ ಪ್ರಸಿದ್ಧ ಸೈಕಲ್ ಸ್ಪರ್ಧೆ ಹೆಚ್ಚು ಜನಮನ್ನಣೆಗಳಿಸಿದೆ.

ವಿಶ್ವ ಬೈಸಿಕಲ್ ದಿನದ ಇತಿಹಾಸ: ಬೈಸಿಕಲ್‌ಗಳ ಪ್ರಭಾವ ಸಮಾಜದ ಮೇಲೆ ತುಂಬಾ ಭಿನ್ನವಾಗಿದೆ. ಬಡ ಜನರು ಹೆಚ್ಚಾಗಿ ತಮ್ಮ ಸೈಕಲ್‌ಗಳನ್ನು ಮೂಲ ಸಾರಿಗೆಗಾಗಿ ಬಳಸುವುದನ್ನು ಮನಗಂಡ ಯು.ಎಸ್. ಮೂಲದ ಸಮಾಜಶಾಸ್ತç ಪ್ರಾಧ್ಯಾಪಕ ರೆಝೇಕ್ ಸಿಬಿಲ್ಸಿಕಿ ತಮ್ಮ ತರಗತಿಗಳಲ್ಲಿ ಸೈಕಲುಗಳ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಸೈಕ್ಲಿಂಗ್ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಪ್ರಯೋಜನಗಳಿಗೆ ಒಂದು ಮೂಲವಾಗಿದೆ ಎಂದು ವಾದಿಸುತ್ತಿದ್ದರು. ತಮ್ಮ ಶೈಕ್ಷಣಿಕ ಯೋಜನೆಗಳಲ್ಲೂ ಸೈಕಲುಗಳ ಮಹತ್ವವನ್ನು ಅಳವಡಿಸಿಕೊಂಡ ರೆಝೇಕ್, ಸಮಾಜದ ಬಡವರು ಬದುಕು ಕಟ್ಟಿಕೊಳ್ಳುವಲ್ಲಿ ಸೈಕಲ್‌ಗಳು ವಹಿಸುವ ಪಾತ್ರ ಮತ್ತು ಅವುಗಳ ಅಭಿವೃದ್ಧಿಯ ಬಗ್ಗೆ ಇನ್ನಷ್ಟು ಅನ್ವೇಷಿಸಿದರು. ಬಳಿಕ ಮತ್ತಷ್ಟು ಉತ್ಸಾಹಿಗಳಾಗಿ ಜನರನ್ನು ಸಂಘಟಿಸಿ ತಳಮಟ್ಟದಿಂದಲೇ ಈ ಕುರಿತು ಸಾರ್ವಜನಿಕ ಅಭಿಯಾನವನ್ನು ಪ್ರಾರಂಭಿಸಿದರು. ದಿನ ಕಳೆದಂತೆ ಇದು ದೊಡ್ಡ-ಪ್ರಮಾಣದ ಜನ ಚಳುವಳಿಯಾಗಿ ರೂಪು ಪಡೆಯಿತು. ಈ ಚಳುವಳಿ ಆರಂಭಗೊAಡ ದಿನದ ಧ್ಯೋತಕವಾಗಿ ವಿಶ್ವ ಬೈಸಿಕಲ್ ದಿನದ ಆಚರಣೆಗಳು ಬಹಳಷ್ಟು ದೇಶÀಗಳಲ್ಲಿ ನಡೆಯತೊಡಗಿದವು. ಸೈಕಲ್ ದಿನಾಚರಣೆಯ ಮಹತ್ವಕ್ಕೆ ಜಾಗತಿಕ ಮನ್ನಣೆ ನೀಡಬೇಕು ಎಂಬ ಕೂಗು ಅಂದಿನಿAದ ವ್ಯಾಪಕವಾಗ ತೊಡಗಿತು. ಇದರಿಂದಾಗಿ ೨೦೧೫ ರಲ್ಲಿ ವಿಶ್ವಸಂಸ್ಥೆಯು ಜೂನ್ ೩ರನ್ನು ವಿಶ್ವ ಬೈಸಿಕಲ್ ದಿನವನ್ನಾಗಿ ಘೋಷಿಸುವ ನಿರ್ಣಯವನ್ನು ಮಂಡಿಸಿತು. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ೧೯೩ ಸದಸ್ಯ ರಾಷ್ಟçಗಳು ೨೦೧೮ರ ಏಪ್ರಿಲ್ ೧೨ರಂದು ಸರ್ವಾನುಮತದಿಂದ ಅಂಗೀಕರಿಸಿದವು.

ಆಫ್ರಿಕಾದಲ್ಲಿ ಸೈಕಲ್ ಕ್ರಾಂತಿ: ವಿಶ್ವ ಬೈಸಿಕಲ್ ದಿನಾಚರಣೆ ಜಾರಿಯಾದಾಗಿನಿಂದ ಆಫ್ರಿಕಾದಲ್ಲಿ ದೊಡ್ಡ ಬದಲಾವಣೆ ಕಂಡು ಬಂದಿದೆ. ವಿಶ್ವ ಬೈಸಿಕಲ್ ದಿನದ ಅಂಗವಾಗಿ ಕೂಪ್-ಆಫ್ರಿಕಾ (ಬಡತನ ಹೋಗಲಾಡಿ ಸಲು ಸೈಕಲ್ ದಾನವಾಗಿ ನೀಡುವ ಯೋಜನೆ) ಎಂಬ ವಿನೂತನ ಯೋಜನೆಯೊಂದನ್ನು ಆಫ್ರಿಕಾದಲ್ಲಿ ಪರಿಚಯಿಸಲಾಯಿತು. ರೈತರು, ವಿದ್ಯಾರ್ಥಿಗಳು, ಆರೋಗ್ಯ ಸ್ವಯಂಸೇವಕರು ಮೊದಲಾದ ವರ್ಗ ದವರಿಗೆ ಇದರಿಂದ ಭಾರಿ ಪ್ರಯೋಜನವಾಯಿತು ಎಂಬುದು ವಿಶ್ವಸಂಸ್ಥೆಯ ಲೆಕ್ಕಾಚಾರ. ಉರಿಬಿಸಿಲಿನಲ್ಲಿ ಕಿ.ಮೀ. ಲೆಕ್ಕದಲ್ಲಿ ಕಾಲ್ನಡಿಗೆಯಲ್ಲಿ ತೆರಳಬೇಕಾದ ದುಸ್ತರತೆಯಿಂದ ಆಫ್ರೀಕಾದ ಬಹುತೇಕ ಬಡ ರೈತರನ್ನು ಪಾರು ಮಾಡಿದ ಕೀರ್ತಿ ಸೈಕಲುಗಳಿಗೆ ಸಲ್ಲಲೇಬೇಕು. ಅಲ್ಲಿನ ಬಡ ವಿದ್ಯಾರ್ಥಿಗಳಿಗೆ ಸೈಕಲ್ ದೊರೆತ ಕಾರಣ ಅವರು ಮನೆಕೆಲಸ ಮತ್ತು ಶಾಲೆಯ ಪಠ್ಯ ಚಟುವಟಿಕೆ ಗಳನ್ನು ಸಂಯೋಜಿಸಲು, ಸುದೀರ್ಘ ನಡಿಗೆಯಿಂದ ತಪ್ಪಿಸಲು ಹಾಗೂ ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಲು ಹೆಚ್ಚು ನೆರವಾಯಿತು ಎನ್ನಲಾಗು ತ್ತಿದೆ. ವಿಶ್ವ ಬೈಸಿಕಲ್ ದಿನಾಚರಣೆಯ ಮಹತ್ವವೇ ಇದರ ಹಿಂದಿರುವ ಪ್ರಧಾನ ಪ್ರೇರಣೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಜನರು ಬೈಸಿಕಲ್ ರೇಸ್ ಮತ್ತು ನೂರಾರು ಕಿ.ಮೀ. ಗಳ ಟ್ರಿಪ್‌ಗಳನ್ನು ಆಯೋಜಿಸುವ ಮೂಲಕ ವಿಶ್ವ ಬೈಸಿಕಲ್ ದಿನವನ್ನು ಆಚರಿಸುತ್ತಿದ್ದರು. ಆದರೆ ಇದೀಗ ಜಗತ್ತಿನ ಎಲ್ಲೆಡೆ ಕಾಣಿಸಿಕೊಂಡಿರುವ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಜನರು ಒಟ್ಟುಗೂಡಿ ಸಾರ್ವಜನಿಕವಾಗಿ ಈ ದಿನವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ.

ಕೊಡಗು ಜಿಲ್ಲೆಯಲ್ಲಿ ಅನೇಕ ಮಂದಿ ಮಕ್ಕಳಿಂದ ಹಿಡಿದು ವೃದ್ಧರೂ ಕೂಡ ಬೆಳಗ್ಗಿನ ತಮ್ಮ ದಿನಚರಿಯಲ್ಲಿ ಸೈಕ್ಲಿಂಗ್ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡು ಸದೃಢ ಆರೋಗ್ಯ ಬೆಳೆಸಿಕೊಳ್ಳುವ ಸಂಬAಧ ದಿಡ್ಡ ಹೆಜ್ಜೆ ಇಟ್ಟಿದ್ದಾರೆ. ಗುಡ್ಡಗಾಡು ಪ್ರದೇಶವಾದರೂ ಸೈಕ್ಲಿಂಗ್‌ನಲ್ಲಿ ತೊಡಗಿರುವ ಮಂದಿಗೆ ವರ್ಷದ ಪ್ರತೀದಿನವೂ ಸೈಕ್ಲಿಂಗ್ ದಿನವೇ ಆಗಿರುತ್ತದೆ.

-ರಫೀಕ್ ತೂಚಮಕೇರಿ