
ಸಿದ್ದಾಪುರ, ಜೂ. ೨: ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಮಧ್ಯರಾತ್ರಿ ಮನೆಯೊಂದರ ಮೇಲೆರಗಿದ ಕಾಡಾನೆಯೊಂದು ಕಿ.ಮೀ. ದೂರ ದಂಪತಿಯನ್ನು ಅಟ್ಟಾಡಿಸಿದ ಘಟನೆ ವಾಲ್ನೂರು ಸಮೀಪ ಬಾಳೆಗುಂಡಿಯಲ್ಲಿ ನಡೆದಿದೆ.
ಬಾಳೆಗುಂಡಿಯ ಗಿರಿಜನ ಕಾಲೋನಿಯ ಸ್ವಾಮಿ ಹಾಗೂ ಯಶೋಧ ದಂಪತಿ ಗಾಢ ನಿದ್ದೆಯಲ್ಲಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಏನಾಯಿತು ಎಂದು ನೋಡುವಷ್ಟರಲ್ಲಿ ಶೀಟ್ನಿಂದ ನಿರ್ಮಿಸಲಾಗಿದ್ದ ಮನೆ ಸಂಪೂರ್ಣವಾಗಿ
(ಮೊದಲ ಪುಟದಿಂದ) ಜಖಂಗೊAಡಿತಲ್ಲದೆ ಸ್ವಾಮಿ ಅವರಿಗೂ ಗಾಯಗಳಾದವು. ಜೀವ ಉಳಿಸಿಕೊಳ್ಳುವುದಕ್ಕಾಗಿ ದಂಪತಿ ಓಡಲು ಆರಂಭಿಸಿದಾಗ ಆನೆ ಕೂಡ ಹಿಂಬಾಲಿಸಿತು. ಸ್ವಾಮಿ ಹಾಗೂ ಯಶೋಧ ಬೇರೆ ಬೇರೆ ದಿಕ್ಕಿನಲ್ಲಿ ಓಡತೊಡಗಿದರು. ಸುಮಾರು ಒಂದು ಕಿ.ಮೀ. ದೂರ ಅಟ್ಟಾಡಿಸಿದ ಕಾಡಾನೆ ನಂತರ ಜಖಂಗೊAಡ ಮನೆಯತ್ತ ಮತ್ತೆ ತೆರಳಿದೆ. ಇದರಿಂದ ಆತಂಕಗೊAಡ ದಂಪತಿ ರಾತ್ರಿ ವೇಳೆ ತಾವಿದ್ದ ಸ್ಥಳದಲ್ಲೇ ಇದ್ದು ಬೆಳಿಗ್ಗೆ ಮನೆಗೆ ಮರಳಿದ್ದಾರೆ. ಆದರೆ ವಾಸಕ್ಕೆ ಮನೆ ಇಲ್ಲದಾಗಿದ್ದು, ಅಪಾರ ನಷ್ಟದೊಂದಿಗೆ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸ್ಥಳಕ್ಕೆ ಮೀನುಕೊಲ್ಲಿ ಅರಣ್ಯ ಭಾಗದ ವನಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಅರಣ್ಯ ರಕ್ಷಕ ಚರಣ್ ಭೇಟಿ ನೀಡಿ ಪರಿಶೀಲಿಸಿದರು. ಕಾಡಾನೆ ಹಾವಳಿ ಮಿತಿ ಮೀರಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯರು ತಕ್ಷಣ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಬೇಕು ಮತ್ತು ಮನೆ ಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾ.ಪಂ. ಸದಸ್ಯ ಭುವನೇಂದ್ರ ಮಾತನಾಡಿ, ಬರಡಿ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು ೯ ಕಿ.ಮೀ. ದೂರ ರೈಲ್ವೆ ಕಂಬಿಗಳ ಮೂಲಕ ಬೇಲಿ ನಿರ್ಮಿಸುವ ಕಾರ್ಯ ಅಪೂರ್ಣವಾಗಿರುವುದೇ ಕಾಡಾನೆಗಳ ಹಾವಳಿ ಮಿತಿ ಮೀರಲು ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಅಮ್ಮಂಗಾಲ ಗ್ರಾಮದಲ್ಲಿ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಸುತ್ತಮುತ್ತಲ ತೋಟಗಳು ನಾಶವಾಗುತ್ತಿವೆ. ಆದರೆ ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದರು. ತಕ್ಷಣ ಬೇಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಮತ್ತು ಆನೆಗಳನ್ನು ಕಾಡಿಗಟ್ಟಬೇಕೆಂದು ಒತ್ತಾಯಿಸಿದರು. ಸದಸ್ಯೆ ಭಾಗ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು.