ಕಣಿವೆ, ಜೂ. ೨: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಬಾಧಿಸುತ್ತಿರುವ ಬಗ್ಗೆ ಕೆಲವು ರೈತರು ಪತ್ರಿಕೆ ಯೊಂದಿಗೆ ದೂರಿಕೊಂಡಿದ್ದಾರೆ. ಕುಶಾಲನಗರ ತಾಲೂಕಿನ ತೊರೆನೂರು, ಹೆಬ್ಬಾಲೆ, ಶಿರಂಗಾಲ, ಹುಲುಸೆ, ಕೆದಕಲ್ ಬಳಿಯ ಹೊರೂರು, ಸೋಮವಾರಪೇಟೆ ತಾಲೂಕಿನ ಗರ್ವಾಲೆ, ಮಾದಾಪುರ, ತಾಕೇರಿ, ಸೂರ್ಲಬ್ಬಿ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಜಾನುವಾರುಗಳು ಕಾಲು ಬಾಯಿ ಜ್ವರಕ್ಕೆ ತುತ್ತಾಗಿರುವ ಕುರಿತು ಅನೇಕ ಕೃಷಿಕರು ದೂರಿದ್ದಾರೆ.
ಅವಿಭಜಿತ ಸೋಮವಾರಪೇಟೆ ತಾಲೂಕಿನಲ್ಲಿ ೨೦೧೯ ರ ಗಣತಿ ಪ್ರಕಾರ ಹಸು ಹಾಗೂ ಎಮ್ಮೆಗಳು ಸೇರಿ ೭೭ ಸಾವಿರ ಜಾನುವಾರುಗಳಿದ್ದು, ಇವುಗಳ ಅನುಸಾರ ವೈದ್ಯಕೀಯ ಸೌಲಭ್ಯ ಒದಗಿಸಲು ಪಶುಪಾಲನಾ ಇಲಾಖೆಯಲ್ಲಿ ಪೂರಕ ಸಿಬ್ಬಂದಿಗಳೇ ಇಲ್ಲ ಎಂಬುದು ಆತಂಕದ ವಿಷಯ. ಇರುವ ಸಿಬ್ಬಂದಿಗಳು ಕೂಡ ಸರಿಯಾಗಿ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುವಲ್ಲಿ ಮಂದಗತಿ ತಾಳುತ್ತಿರುವುದು ಜಾನುವಾರುಗಳ ಕಾಲು ಬಾಯಿ ಜ್ವರ ಉಲ್ಬಣಿಸಲು ಕಾರಣ ಎನ್ನಲಾಗುತ್ತಿದೆ. ಪ್ರತಿ ಆರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ಸರ್ಕಾರ ಉಚಿತವಾಗಿ ಪಶು ಕೃಷಿಕರಿಗೆ ನೀಡುವ ಕಾಲುಬಾಯಿ ಜ್ವರ ನಿವಾರಣ ಲಸಿಕೆಯನ್ನು
(ಮೊದಲ ಪುಟದಿಂದ) ಹಾಕಬೇಕಿದ್ದರೂ ಕೂಡ, ಕೆಲವು ಕಡೆಗಳಲ್ಲಿ ಆ ಪ್ರಕ್ರಿಯೆ ಸರಿಯಾಗಿ ನಡೆಯದೇ ಇರುವುದರಿಂದಲೂ ಈ ಸಮಸ್ಯೆ ಉಲ್ಬಣಿಸಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೇ ಕಳೆದ ಬಾರಿ ಸರ್ಕಾರ ಪೂರೈಸಿದ್ದ ಕಾಲುಬಾಯಿ ಜ್ವರ ನಿವಾರಣೆ ಹಾಗೂ ಜಾನುವಾರು ಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ಉತ್ತಮ ಗುಣಮಟ್ಟದಲ್ಲಿ ಇಲ್ಲದಿರುವ ಬಗ್ಗೆ ಇಲಾಖೆಗಳಿಗೆ ಸರಬರಾಜು ಮಾಡಿದ್ದ ಲಸಿಕೆಗಳನ್ನು ಮರಳಿ ಪಡೆದಿತ್ತು ಎನ್ನಲಾಗಿದೆ.
ಇನ್ನು ಕೆಲವು ರೈತರು ಜಾನುವಾರುಗಳು ನೀಡುವ ಹಾಲಿನ ಪ್ರಮಾಣ ಕುಂಠಿತಗೊಳ್ಳುತ್ತದೆ ಎಂಬ ಕಾರಣದಿಂದ ಲಸಿಕೆಯನ್ನು ನಿರಾಕರಿಸುವುದು ಉಂಟು.
ಆದರೆ ಅಂತಹ ಪಶುಪಾಲಕರ ಬಳಿ ತೆರಳಿ ಅಂತಹ ರೈತರಿಗೆ ಸರಿಯಾದ ಮಾರ್ಗದರ್ಶನ ಮಾಡಿ ಸರ್ಕಾರದಿಂದ ಸಿಗುವ ಉಚಿತ ಲಸಿಕೆಯ ಬಗ್ಗೆ ಮಾಹಿತಿ ನೀಡಿ ಕಡ್ಡಾಯವಾಗಿ ಲಸಿಕೆ ನೀಡುವಲ್ಲಿ ಇಲಾಖೆಯ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವು ಸಿಬ್ಬಂದಿಗಳು ಪಶು ಪಾಲಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ತೆರಳಿ ಜಾನುವಾರುಗಳಿಲ್ಲದೇ ಮರಳುವುದೂ ಉಂಟು.
ಪಶು ಪಾಲನಾ ಇಲಾಖೆ ಅಧಿಕಾರಿಗಳು ಆಯಾಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಶು ಪಾಲನಾ ರೈತರನ್ನು ಗುರುತಿಸಿ ಅವರಿಗೆ ಸೂಕ್ತ ತಿಳುವಳಿಕೆ ಹಾಗೂ ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಪ್ರಾಮಾಣಿಕ ಸೇವೆಗೆ ಮುಂದಾಗಬೇಕಿದೆ. ಪಂಚಾಯಿತಿ ಕಡೆಯಿಂದ ಗ್ರಾಮಗಳಲ್ಲಿ ಪ್ರಚಾರ ಮಾಡಿಸಿ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಿತ ಗ್ರಾಮಗಳಿಗೆ ತೆರಳಿ ಪಶು ಪಾಲನಾ ಹಾಗೂ ಹೈನುಗಾರಿಕಾ ರೈತರ ಜಾನುವಾರುಗಳನ್ನು ಸಂರಕ್ಷಿಸುವ ಹಾಗೂ ಸಕಾಲದಲ್ಲಿ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗೋಮಾತೆಯನ್ನು ಉಳಿಸುವ ಸಂಕಲ್ಪ ತೊಡಬೇಕಿದೆ.
ಕಾಲು ಬಾಯಿ ಜ್ವರ ಬಾಧೆಗೆ ತುತ್ತಾಗಿರುವ ಜಾನುವಾರುಗಳನ್ನು ಮನೆಯಲ್ಲಿಯೇ ಕಟ್ಟಿ ಚಿಕಿತ್ಸೆ ನೀಡಬೇಕು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವುಗಳಿಗೆ ಬೇಕಾದ ಖನಿಜ ಲವಣಾಂಶಗಳು ಹಾಗೂ ಪೌಷ್ಠಿಕಯುಕ್ತ ಆಹಾರಗಳನ್ನು ನೀಡಬೇಕಿದೆ.
ಮೊದಲೇ ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಮನುಷ್ಯರ ನಡುವೆ, ಮನುಷ್ಯರ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶ ಗಳನ್ನು ಹಾಲಿನ ಮೂಲಕ ಒದಗಿಸುವ ಗೋಮಾತೆಯನ್ನು ಸಂರಕ್ಷಿಸಲು ಎಲ್ಲರೂ ಪಣ ತೊಡಬೇಕು.