ನಾಪೋಕ್ಲು, ಜೂ. ೩: ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಬಲ್ಲಮಾವಟಿ ಗ್ರಾಮ ಕೊರೊನಾ ಮುಕ್ತವಾಗಿದೆ. ಈ ಗ್ರಾಮದಲ್ಲಿ ಏಳು ಜನ ಕೊರೊನಾ ಸೋಂಕಿತರಿದ್ದರು. ಈಗ ಎಲ್ಲರೂ ಗುಣಮುಖರಾಗಿದ್ದಾರೆ. ಹೊಸದಾಗಿ ಯಾವದೇ ಪ್ರಕರಣಗಳು ಪತ್ತೆಯಾಗಿಲ್ಲ.

ಬಲ್ಲಮಾವಟಿ ಗ್ರಾಮ ಸೋಂಕು ಮುಕ್ತವಾಗಿದ್ದರೂ ಕೂಡ ಈ ಪಂಚಾಯಿತಿ ವ್ಯಾಪ್ತಿಯಲ್ಲಿನ ಇನ್ನುಳಿದ ಗ್ರಾಮಗಳಾದ ನೆಲಜಿ, ಪೇರೂರು, ದೊಡ್ಡಪುಲಿಕೋಟು ಗ್ರಾಮಗಳಲ್ಲಿ ಕೊರೊನಾ ಪ್ರಕರಣ ಸಕ್ರಿಯವಾಗಿದೆ.

ಬಲ್ಲಮಾವಟಿ ಗ್ರಾಮದ ಕೊರೊನಾ ಸೋಂಕಿತರ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿ ಪ್ರತೀ ದಿನ ಭೇಟಿ ನೀಡಿ ಅವಶ್ಯವಿರುವ ಚಿಕಿತ್ಸೆ ನೀಡುತ್ತಿದ್ದರು. ಅವರೊಂದಿಗೆ ಗ್ರಾಮ ಪಂಚಾಯಿತಿ ಆಡಳಿತದಿಂದ ಅವರಿಗೆ ಅಗತ್ಯವಿರುವ ವಸ್ತುಗಳ ಪೂರೈಕೆಯೊಂದಿಗೆ ಅವರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿತ್ತು.

ಸರಕಾರ ಕೆಲವು ನಿಗದಿತ ಶುಭ ಸಮಾರಂಭಗಳಿಗೆ ಅನುಮತಿ ನೀಡಿದೆ. ಅಂತಹ ಕಾರ್ಯಕ್ರಮಗಳಿಗೆ ಆಶಾ ಕಾರ್ಯಕರ್ತೆಯರು ಕಂದಾಯ ಇಲಾಖೆ ಸಿಬ್ಬಂದಿಗಳನ್ನು, ಆರೋಗ್ಯ ಕಾರ್ಯಕರ್ತರನ್ನು ಕಳುಹಿಸಿ ಅಲ್ಲಿಗೆ ಆಗಮಿಸಿದ ಹೊರಗಿನ ಜನರ ಟ್ರಾವಲ್ ಹಿಸ್ಟಿç, ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆ ಹಾಕುವದರೊಂದಿಗೆ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಖಾಸಗಿ ವಾಹನಗಳು, ಖಾಸಗಿ ಆ್ಯಂಬ್ಯುಲೆನ್ಸ್ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ದೇಣಿಗೆ ಸಂಗ್ರಹ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಂಚಾಯಿತಿಯಲ್ಲಿ ದೇಣಿಗೆ ಸಂಗ್ರಹ ಮಾಡುವ ಕಾರ್ಯಕೈಗೊಳ್ಳಲಾಗಿದೆ. ದೇಣಿಗೆಯಾಗಿ ೫ ಸಾವಿರ ರೂ.ಗಳನ್ನು ಪ್ರಥಮವಾಗಿ ನೀಡುವ ಮೂಲಕ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಮಾನವೀಯತೆ ಮೆರೆದಿದ್ದಾರೆ. ದೇಣಿಗೆ ಹಣದಲ್ಲಿ ಈಗಾಗಲೇ ೨೫ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಗಿದೆ.

ಟಾಸ್ಕ್ ಫೋರ್ಸ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯ ಸಹಕಾರದಿಂದ ನಮಗೆ ಯಶಸ್ಸು ಲಭಿಸಿದೆ. ಮುಂದಿನ ಕೆಲವೇ ದಿನಗಳಲ್ಲಿ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಶ್ರಮಿಸುತ್ತಿದ್ದೇವೆ. ಕೊರೊನಾ ಹತೋಟಿಗೆ ಬಂದ ನಂತರ ದೇಣಿಗೆ ಹಣದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಕಂದಾಯ ಇಲಾಖಾ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಬಲ್ಲಮಾವಟಿ ಪಂಚಾಯಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ತಿಳಿಸಿದ್ದಾರೆ.

ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. ೮೦ರಷ್ಟು ಮಂದಿಗೆ ಮೊದಲ ಲಸಿಕೆ ನೀಡಲಾಗಿದೆ. ಸೋಂಕಿತರ ಬಗ್ಗೆ ಮಾಹಿತಿ ದೊರೆತ ಕೂಡಲೇ ನಮ್ಮ ತಂಡ ಅವರನ್ನು ಭೇಟಿ ಮಾಡಿ ಸೂಕ್ತ ಸಲಹೆ, ಸೂಚನೆ ನೀಡುತ್ತಿದೆ. ಕೊರೊನಾ ಹತೋಟಿಗೆ ಬರಲು ಸಾಧ್ಯವಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಮಾಡಲಾಗಿದೆ. ಅದರೊಂದಿಗೆ ಬಿತ್ತಿ ಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಲಾಗಿದೆ ಎಂದು ಪಿಡಿಓ ಶ್ರೀಧರ್ ಮಾಹಿತಿಯಿತ್ತರು.

-ಪಿ.ವಿ.ಪ್ರಭಾಕರ್