ಕೂಡಿಗೆ, ಜೂ. ೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರವು ಕೊರೊನಾ ಮುಕ್ತವಾಗಿದೆ.
ಈ ಪುನರ್ವಸತಿ ಕೇಂದ್ರದಲ್ಲಿರುವ ೩೫೪ ಕುಟುಂಬದವರು ಸ್ವಯಂ ಘೋಷಿತವಾಗಿ ಕೇಂದ್ರಕ್ಕೆ ಯಾರೂ ಪ್ರವೇಶಿಸದಂತೆ ಅನಾವಶ್ಯಕವಾಗಿ ಯಾವುದೇ ವಾಹನಗಳು ಓಡಾಡದಂತೆ ಮುಖ್ಯ ದ್ವಾರದಲ್ಲಿ ಬಂದ್ ಮಾಡಿದ್ದಾರೆ.
ದಿಡ್ಡಳ್ಳಿ ಪುನರ್ವಸತಿ ಕೇಂದ್ರ ೧೨೫೦ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ಕೇAದ್ರದ ಎಲ್ಲಾ ಕುಟುಂಬದವರು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಸಿಬ್ಬಂದಿಗಳು ನೀಡಿದ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಗ್ರಾಮ ಪಂಚಾಯಿತಿ ವತಿಯಿಂದ ಕೇಂದ್ರಕ್ಕೆ ಔಷಧಿಗಳನ್ನು ಸಿಂಪಡಣೆ ಮಾಡುವ ಕಾರ್ಯದಲ್ಲಿ ಕೂಡ ಸಹ ಭಾಗಿಯಾಗಿದ್ದು, ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗದಂತೆ ಸುರಕ್ಷತೆ ಕಾಪಾಡಿಕೊಂಡಿದ್ದಾರೆ.
ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಕುಟುಂಬದವರು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ಈ ಕೇಂದ್ರದಲ್ಲಿರುವವರು ಕೊರೊನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಾಗೃತರಾಗಿದ್ದೇವೆ. ಮುಂದಿನದ್ದೆಲ್ಲಾ ದೇವರ ಇಚ್ಛೆ ಎನ್ನುತ್ತಾರೆ ಕೇಂದ್ರದ ಮುಖ್ಯಸ್ಥರಾದ ವೈ.ಸಿ. ಮುತ್ತಾ, ಅಪ್ಪು, ಮೀಸೆ ಮುತ್ತ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಪ್ರತಿಕ್ರಿಯಿಸಿ ಗ್ರಾಮ ಪಂಚಾಯಿತಿ ವತಿಯಿಂದ ಶುಚಿತ್ವ ಮತ್ತು ರೋಗ ನಿರೋಧಕ ಶಕ್ತಿಯ ಔಷಧಿಯನ್ನು ಸಿಂಪಡಣೆ ಮಾಡಲಾಗಿದೆ. ಅಲ್ಲದೆ ಅಲ್ಲಿನ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ರೋಗ ಬಗ್ಗೆ ಮುಂಜಾಗ್ರತೆ ವಹಿಸಿದ್ದಾರೆ ಎಂದು ತಿಳಿಸಿದರು. -ನಾಗರಾಜಶೇಟ್ಟಿ