ವೀರಾಜಪೇಟೆ, ಮೇ ೩೧: ಪಟ್ಟಣ ಪಂಚಾಯಿತಿ ಕೆಲವು ಸದಸ್ಯರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರದ ನಿಯಮವನ್ನು ಮೀರಿ ತಮಗೆ ಬೇಕಾದವರಿಗೆ ಕೋವಿಡ್ ಲಸಿಕೆಯನ್ನು ಕೊಡಿಸುತ್ತಿದ್ದಾರೆ. ಆದ್ದರಿಂದ ಪುರಭವನದಲ್ಲಿನ ಲಸಿಕಾ ಕೇಂದ್ರವನ್ನು ಕೂಡಲೆ ಬೇರೆಡೆಗೆ ಸ್ಥಳಾಂತರಿಸುವAತೆ ವೀರಾಜಪೇಟೆ ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಪಿ.ಎ ಮಂಜುನಾಥ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಹಿಳಾ ಸಮಾಜದಲ್ಲಿ ಲಸಿಕೆ ನೀಡುತ್ತಿದ್ದರು. ಬಳಿಕ ಪ್ರಸ್ತುತ ಪುರಭವನ ಸಭಾಂಗಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಪುರಭವನ ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಆದರೆ ಈ ಸಭಾಂಗಣದಲ್ಲಿ ಲಸಿಕೆ ಹಾಕುತ್ತಿರುವುದರಿಂದ ಪಟ್ಟಣ ಪಂಚಾಯಿತಿಯ ಆಡಳಿತ ಪ್ರಮುಖರೊಬ್ಬರು ಹಾಗೂ ಕೆಲವು ಸದಸ್ಯರು ಪಂಚಾಯಿತಿಯ ಮೊಹರನ್ನು ಬಳಸಿ ಪಂಚಾಯಿತಿಯ ನೌಕರರಲ್ಲದ ಸಾಕಷ್ಟು ಜನರಿಗೆ ಲಸಿಕೆ ಹಾಕಿಸಿದ್ದಾರೆ. ಈ ಕುರಿತು ಲಸಿಕಾ ಕೇಂದ್ರದ ಸಿಬ್ಬಂದಿಗಳು ಪ್ರಶ್ನಿಸಿದರೆ ಇವರೆಲ್ಲರು ನಮ್ಮ ಪಂಚಾಯಿತಿ ಸಿಬ್ಬಂದಿಗಳು ಎಂದು ಸಮರ್ಥಿಸುತ್ತಾರೆ. ನಮ್ಮ ಪಂಚಾಯಿತಿ ಸಭಾಂಗಣದಲ್ಲಿ ಲಸಿಕೆ ಹಾಕಲು ಸ್ಥಳ ನೀಡಿದ್ದೇವೆ. ನಾವು ಹೇಳಿದವರಿಗೆ ಲಸಿಕೆ ನೀಡದಿದ್ದರೆ ನಿಮ್ಮನ್ನು ವರ್ಗಾವಣೆ ಮಾಡಿಸುತ್ತೇವೆ ಎಂದು ಸಿಬ್ಬಂದಿಗೆ ಬಹಿರಂಗವಾಗಿ ಬೆದರಿಸುತ್ತಿದ್ದಾರೆ ಎಂದು ಮಂಜುನಾಥ್ ದೂರಿದರು.

ಈ ವಿಚಾರವನ್ನು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ತಹಶೀಲ್ದಾರ್, ತಾಲೂಕು ಆರೋಗ್ಯ ಅಧಿಕಾರಿ ವೀರಾಜಪೇಟೆ ವೈದ್ಯಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಗ್ರಾಮಾಂತರ ಪ್ರದೇಶದ ಸಾಕಷ್ಟು ಜನರಿಗೆ ಪಂಚಾಯಿತಿಯ ಮೊಹರನ್ನು ಬಳಸಿ ಸಿಬ್ಬಂದಿಗಳೆAದು ತೋರಿಸಿ ಲಸಿಕೆಯನ್ನು ಕೊಡಿಸಲಾಗಿದ್ದು, ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆಯಲಾಗುವುದು. ಜಿಲ್ಲಾಧಿಕಾರಿಗಳು ಈ ಕುರಿತು ತನಿಖೆ ನಡೆಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ವೀರಾಜಪೇಟೆ ನಾಗರಿಕ ಹೋರಾಟ ಸಮಿತಿಯ ಯೋಗೇಶ್ ನಾಯ್ಡು ಮಾತನಾಡಿ ಕೆಲವು ಸದಸ್ಯರು ತಮ್ಮ ಪ್ರಭಾವ ಭೀರಿ ಲಸಿಕೆ ಪಡೆಯಲು ಸಾಲಿನಲ್ಲಿ ನಿಂತಿರುವವರನ್ನು ಕಡೆಗಣಿಸಿ ತಮಗೆ ಬೇಕಾದವರಿಗೆ ಲಸಿಕೆ ಕೊಡಿಸುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಲಸಿಕಾ ಕೇಂದ್ರವನ್ನು ಸ್ಥಳಾಂತರಿಸಬೇಕೆAದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಾಜ ಸೇವಕರಾದ ಕುಯಿಮಂಡ ರಾಕೇಶ್ ಬಿದ್ದಪ್ಪ, ವೀರಾಜಪೇಟೆ ನಾಗರಿಕ ಹೋರಾಟ ಸಮಿತಿಯ ಅಶ್ರಫ್ ಉಪಸ್ಥಿತರಿದ್ದರು.

ತಹಶೀಲ್ದಾರ್ ಸ್ಪಷ್ಟನೆ

ತಹಶೀಲ್ದಾರ್ ಆರ್. ಯೋಗಾನಂದ್ ಈ ಕುರಿತು ಸ್ಪಷ್ಟನೆ ನೀಡಿದ್ದು, ಹಲವು ಸದಸ್ಯರ ವಿರುದ್ಧ ಈ ಬಗ್ಗೆ ದೂರುಗಳು ಬಂದಿದ್ದು, ಸರ್ಕಾರದ ನಿಯಮದಂತೆ ಅರ್ಹರಿಗೆ ಮಾತ್ರ ಲಸಿಕೆ ನೀಡುವಂತೆ ಕೇಂದ್ರದ ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ. ಲಸಿಕಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.