ಇಆರ್ಎಸ್ಎಸ್ ೧೧೨ ತಂಡ ಸ್ಪಂದನ
ಮಡಿಕೇರಿ, ಮೇ ೩೧: ಇಳಿವಯಸ್ಸಿನ ಮಾನಸಿಕವಾಗಿ ತುಸು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯೋರ್ವರಿಗೆ ಅವರ ಮನೆಯಲ್ಲಿ ಕಿರುಕುಳ ಉಂಟಾಗುತ್ತಿದೆ ಎಂಬ ದೂರಿನಂತೆ ನಿನ್ನೆ ತಡರಾತ್ರಿ ಇಆರ್ಎಸ್ಎಸ್ ೧೧೨ (ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್) ತಂಡ ಭೇಟಿ ನೀಡಿ ಪ್ರಕರಣವನ್ನು ಇತ್ಯರ್ಥ ಪಡಿಸಿದೆ.
ಗಾಳಿಬೀಡು ಪಂಚಾಯಿತಿಗೆ ಒಳಪಡುವ ಕಡಮಕಲ್ಲುವಿನಿಂದ ಇಲಾಖೆಗೆ ಈ ಬಗ್ಗೆ ಸದರಿ ವ್ಯಕ್ತಿಯಿಂದಲೇ ದೂರು ಬಂದಿತ್ತು. ಈ ದೂರನ್ನು ಆಧರಿಸಿ ೧೧೨ ತಂಡಕ್ಕೆ ಕಂಟ್ರೋಲ್ರೂAನಿAದ ಮಾಹಿತಿ ನೀಡಲಾಗಿದ್ದು, ಈ ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ನಂದಾ ಹಾಗೂ ಸಿಬ್ಬಂದಿ ವಿಳಾಸ ಅರಸಿ ಕಡಮಕಲ್ನತ್ತ ತೆರಳಿದೆ. ಆದರೆ ಈ ಸ್ಥಳ ಗಾಳಿಬೀಡು ಪಂಚಾಯಿತಿಗೆ ಸೇರಿದ್ದರೂ ಸನಿಹದ ಮಾರ್ಗ ಇಲ್ಲದೆ ಜೋಡುಪಾಲ, ಸಂಪಾಜೆ, ಸುಳ್ಯ ಮಾರ್ಗವಾಗಿ ಸುಮಾರು ೧೧೦ ಕಿ.ಮೀ. ಕ್ರಮಿಸುವಂತಾಗಿತ್ತು. ಜತೆಗೆ ಆ ಸ್ಥಳದಲ್ಲಿ ನೆಟ್ವರ್ಕ್ ಕೂಡ ಇಲ್ಲದ್ದರಿಂದ ರಾತ್ರಿ ವೇಳೆ ಮಳೆಯ ನಡುವೆ ಆ ವ್ಯಕ್ತಿಯನ್ನು ಹುಡುಕಾಡಿ ಮನೆ ಪತ್ತೆ ಹಚ್ಚಬೇಕಾಗಿತ್ತು.
ಈ ಸಂದರ್ಭ ಆ ವ್ಯಕ್ತಿ ತಮಗೆ ಮನೆಯವರು ಕಿರುಕುಳ ನೀಡುತ್ತಿರುವದಾಗಿ ಆರೋಪಿಸಿದ್ದು, ಪೊಲೀಸರು ಮನೆ ಮಂದಿಯನ್ನು ಸೇರಿಸಿ ಕಾನೂನಿನ ಬಗ್ಗೆ ಅರಿವು ಮೂಡಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಈ ಬಗ್ಗೆ ಎಸ್ಪಿ ಕ್ಷಮಾಮಿಶ್ರಾ ಅವರು ಟ್ವೀಟ್ ಮಾಡಿ ಇಲಾಖೆ ಸ್ಪಂದಿಸಿರುವದನ್ನು ಉಲ್ಲೇಖಿಸಿದ್ದಾರೆ. ಈ ಕಾರ್ಯಪಡೆ ನಿಯೋಜನೆ ಬಳಿಕ ಇಂತಹ ಹಲವಷ್ಟು ದೂರುಗಳು ಇಲಾಖೆಗೆ ಬರುತ್ತಿವೆ ಎನ್ನಲಾಗಿದೆ.