ಕೂಡಿಗೆ, ಮೇ ೩೦: ಕೂಡು ಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆ ಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಲಾಯಿತು. ಇನ್ನೇನು ಮಳೆಗಾಲ ಆರಂಭ ವಾಗಲಿದ್ದು, ಕಾವೇರಿ ನದಿ ತೀರ ಪ್ರದೇಶದಲ್ಲಿರುವವರನ್ನು ಬೇರೆಡೆಗೆ ಸ್ಥಳಾಂತರಗೊಳ್ಳಲು ನೋಟೀಸ್ ನೀಡುವಂತೆ ಸರ್ವ ಸದಸ್ಯರು ಪ್ರಸ್ತಾಪಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮತ್ತು ಕಂದಾಯ ಇಲಾಖೆಯ ವತಿಯಿಂದ ಕೆಲವು ಮನೆಗಳಿಗೆ ನೋಟೀಸ್ ನೀಡಲಾಗಿದೆ. ಉಳಿದ ಮನೆಗಳಿಗೆ ಆದಷ್ಟು ಬೇಗನೇ ನೋಟೀಸ್ ನೀಡಲಾಗುವುದು ಎಂದರು. ಸರ್ಕಾರ ಮನೆ ಸ್ಥಳಾಂತರಕ್ಕೆ ಹಣ ನೀಡುವುದಿಲ್ಲ. ತೀರಾ ಕಡುಬಡವರಿಗೆ ಸರ್ಕಾರಿ ಶಾಲೆ, ಮುಂತಾದ ಸರ್ಕಾರಿ ಕಟ್ಟಡಗಳಲ್ಲಿ ವಾಸ ಮಾಡಲು ಜಾಗದ ವ್ಯವಸ್ಥೆಯನ್ನು ಮಾಡಿಕೊಡಬಹುದು ಎಂದರು.
ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಕೊರೊನಾ ಪರೀಕ್ಷೆ ನಡೆಸಲು ಸರ್ಕಾರ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ತಂಡವು ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸಲಿದೆ ಎಂದು ಪಿಡಿಓ ಸಂತೋಷ್ ಮಾಹಿತಿ ನೀಡಿದರು. ಈ ಸಂದರ್ಭ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯರುಗಳು, ಆಶಾ ಕಾರ್ಯಕರ್ತೆಯರು ಇದ್ದರು.