ಶನಿವಾರಸಂತೆ, ಮೇ ೩೦: ಕೋವಿಡ್-೧೯ ಲಾಕ್ಡೌನ್ ಹಿನ್ನೆಲೆ ಬಡವರ ಸಹಾಯವಾಣಿ ತಂಡದ ವತಿಯಿಂದ ದಾನಿಗಳ ಸಹಕಾರದೊಂದಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಗೌಡಳ್ಳಿ ಮತ್ತು ಕೊಡ್ಲಿಪೇಟೆ ಸರಕಾರಿ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳಿಗೆ, ಲಸಿಕೆ ಪಡೆಯಲು ಬಂದವರಿಗೆ, ರೋಗಿಗಳಿಗೆ, ಪೆಟ್ರೋಲ್ ಬಂಕ್ ಸಿಬ್ಬಂದಿಗಳಿಗೆ ಹಾಗೂ ರಸ್ತೆ ಬದಿಯ ಅನಾಥರಿಗೆ ಸತತ ೫ ದಿನಗಳಿಂದ ಮಧ್ಯಾಹ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಾನಿ, ಉದ್ಯಮಿ ಪವನ್ ದೇವಯ್ಯ ನಿತ್ಯದ ದಾಸೋಹಕ್ಕೆ ಸಹಕಾರ ನೀಡುತ್ತಿದ್ದಾರೆ. ಸಮೀಪದ ಆಲೂರು-ಸಿದ್ದಾಪುರ ಗ್ರಾಮದಲ್ಲಿ ಸೆಸ್ಕ್ ಉದ್ಯೋಗಿ ಗಿರೀಶ್ ಅವರು ೧೯ ಮಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಗುಣಮಟ್ಟದ ಆಹಾರ ಪದಾರ್ಥಗಳ ಕಿಟ್ಟನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ದಾನಿಗಳಿಗೆ ಸಹಾಯವಾಣಿ ತಂಡದ ಸದಸ್ಯರಾದ ಕ.ರ.ವೇ. ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಿಶನ್ ರೈ, ಯತೀಶ್, ಅರ್ಚಕರಾದ ವಿಶ್ವರೂಪಾಚಾರ್ಯ, ಗುರುಪ್ರಸಾದ್, ಜಯಪ್ಪ, ಗೌಡಳ್ಳಿ ಮಹೇಶ್, ದಿನೇಶ್, ಧರ್ಮಾಚಾರ್ಯ ಕೃತಜ್ಞತೆ ಸಲ್ಲಿಸಿದರು.