ಶ್ರೀಮಂಗಲ, ಮೇ ೩೦: ಶ್ರೀಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕೋವಿಡ್ -೧೯ರ ಜಾಗೃತಿ ಸಭೆಯನ್ನು ತಾ. ೨೭ರಂದು ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯಲ್ಲಿ ಶಾಸಕರು ಕೊರೊನಾದ ಪರಿಸ್ಥಿತಿಯ ಬಗ್ಗೆ ಮಾಹಿತಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಪಡೆದು ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಕೊರೊನಾ ಮುಕ್ತವನ್ನಾಗಿ ಮಾಡುವಂತೆ ಸಭೆಯಲ್ಲಿ ತಿಳಿಸಿದರು. ಕೋವಿಡ್ -೧೯ ಮುಕ್ತವಾದಲ್ಲಿ ೧ ಲಕ್ಷ ಪ್ರೋತ್ಸಾಹ ಧನವನ್ನು ಸರಕಾರದಿಂದ ನೀಡಲಾಗುತ್ತದೆಂದು ತಿಳಿಸಿದರು.
ಈ ಸಭೆಯಲ್ಲಿ ಶಾಲಾ ಶಿಕ್ಷಕರಿಗೂ, ಆಶಾ ಕಾರ್ಯಕರ್ತೆಯರಿಗೂ, ಕಿಟ್ಗಳನ್ನು ಶಾಸಕರು ವಿತರಿಸಿದರು. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಸಾಮಗ್ರಿ ಪಡೆಯಲು ಯಾವುದೇ ಬೆರಳಚ್ಚು ಮತ್ತು ಓಟಿಪಿ ನಂ. ಉಪಯೋಗಿಸದೆ ಪಡಿತರ ಸಾಮಗ್ರಿ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಮಾಡ ಸಿ.ಜಯ, ಮುಖ್ಯ ಲೆಕ್ಕಾಧಿಕಾರಿ, ತಹಶೀಲ್ದಾರ್, ಪೊಲೀಸ್ ನಿರೀಕ್ಷಕರು, ಕಾರ್ಯ ನಿರ್ವಹಣಾಧಿಕಾರಿ, ನೋಡೆಲ್ ಅಧಿಕಾರಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪಂಚಾಯಿತಿ ಉಪಾಧ್ಯಕ್ಷರು ಮತ್ತು ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯರುಗಳು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಎಸ್. ಸತೀಶ್ ಹಾಜರಿದ್ದರು.