ಕುಶಾಲನಗರ, ಮೇ ೩೦ : ಬೆಂಗಳೂರಿನ ಮೈ ಸೇವಾ ಫೌಂಡೇಶನ್ ಮೂಲಕ ಕೊಡಗು ಜಿಲ್ಲೆಗೆ ಒದಗಿಸಲಾದ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಮತ್ತು ಆ್ಯಂಬ್ಯುಲೆನ್ಸ್ ಸೇವೆಗೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಫೌಂಡೇಶನ್ ಜಿಲ್ಲಾ ಉಸ್ತುವಾರಿ ಬಿ.ಬಿ. ಭಾರತೀಶ್, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಆಕ್ಸಿಜನ್ ಕೊರತೆಯಿಂದ ಪರದಾಡುವ ಸೋಂಕಿತರ ನೆರವಿಗೆ ಈ ಸೇವೆ ಒದಗಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿಗೆ ಕರೆ ಮಾಡಿದಲ್ಲಿ ಆಕ್ಸಿಜನ್ ಯಂತ್ರವನ್ನು ಮನೆಗೆ ತಲುಪಿಸಿ ರೋಗಿಗೆ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಕೆಲವೊಮ್ಮೆ ತುರ್ತು ವಾಹನಗಳು ಸಕಾಲಕ್ಕೆ ಸೋಂಕಿತರ ಮನೆ ಬಾಗಿಲಿಗೆ ತೆರಳಲು ಸಾಧ್ಯವಾಗುವುದಿಲ್ಲ. ತುರ್ತು ವಾಹನಗಳ ಸೇವೆ ಕೊರತೆ ಸಂದರ್ಭ ಕೂಡ ಮೈಸೇವಾ ಫೌಂಡೇಶನ್‌ನ ಈ ಆ್ಯಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ.

ಕೊಡಗು ಜಿಲ್ಲೆಗೆ ಒಂದು ಆ್ಯಂಬ್ಯುಲೆನ್ಸ್ ಮತ್ತು ೧೦ ಆಕ್ಸಿಜನ್ ಯಂತ್ರಗಳನ್ನು ಒದಗಿಸಲಾಗಿದೆ. ಇದನ್ನು ಆಯ್ದ ಪ್ರದೇಶಗಳಲ್ಲಿ ಸೇವಾ ಕೇಂದ್ರಗಳಲ್ಲಿ ಸ್ಥಾಪಿಸಿ ಜನರಿಗೆ ತಲುಪಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು. ತುರ್ತು ಸಂದರ್ಭ ಅಗತ್ಯವಿದ್ದವರು ೯೪೪೮೩೭೭೫೯೯, ೯೪೮೦೨೩೮೬೧೬ ಗೆ ಸಂಪರ್ಕಿಸುವAತೆ ಭಾರತೀಶ್ ಕೋರಿದರು.

ಬಿಜೆಪಿಯ ಹಿರಿಯ ಪ್ರಮುಖರಾದ ಜಿ.ಎಲ್.ನಾಗರಾಜ್ ಮಾತನಾಡಿದರು. ಈ ಸಂದರ್ಭ ಕುಡಾ ಅಧ್ಯಕ್ಷ ಎಂ.ಎA..ಚರಣ್, ಪಪಂ ಅಧ್ಯಕ್ಷ ಜೈವರ್ಧನ್, ಪ್ರಮುಖರಾದ ಎಂ.ಎನ್.ಕುಮಾರಪ್ಪ, ಎಂ.ಡಿ.ಕೃಷ್ಣಪ್ಪ, ಕೆ.ಜಿ.ಮನು, ವಿ.ಕೆ.ಲೋಕೇಶ್, ಪ್ರವೀಣ್, ಕೆ.ಡಿ.ಪ್ರಶಾಂತ್, ರಾಜು, ನಾರಾಯಣ್, ಚಂದ್ರಶೇಖರ್ ಮತ್ತಿತರರು ಇದ್ದರು.