ವೀರಾಜಪೇಟೆ, ಮೇ೩೦: ಲಾಕ್‌ಡೌನ್ ಸಂದರ್ಭದಲ್ಲಿ ಅಂಗಡಿ ತೆರೆದು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಾಲೀಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ವೀರಾಜಪೇಟೆ ಕಾಕೋಟು ಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕೇರಿ ಗ್ರಾಮದ ನಿವಾಸಿ ಕೆ.ಕೆ. ಚರ್ಮಣ (೫೬) ವಿರುದ್ಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ವೀರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಗೆ ಬಂದ ಮಾಹಿತಿ ಮೇರೆ ದಾಳಿ ನಡೆಸಿದಾಗ ಅಂಗಡಿಯ ಕೋಣೆಯೊಂದರಲ್ಲಿ ಚೀಲದಲ್ಲಿರಿಸಲಾಗಿದ್ದ ಸುಮಾರು ೯೦ ಎಂ.ಎಲ್ ನ ೪೦ ಟೆಟ್ರಾ ಬ್ರಾಂದಿ ಪ್ಯಾಕೆಟ್‌ಗಳಿರುವುದು ಪತ್ತೆಯಾಗಿದೆ. ಮದ್ಯದ ಪ್ಯಾಕೇಟ್‌ಗಳೊಂದಿಗೆ ಮದ್ಯ ಮಾರಾಟದಿಂದ ಬಂದ ೩೫೦ ರೂ ನಗದು ವಶಕ್ಕೆ ಪಡೆದಿದ್ದಾರೆ. ಅಂಗಡಿ ಮಾಲೀಕನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಕಲಂ ೩೨, ೩೪ರ ಅನ್ವಯ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.

-ಕೆ.ಕೆ.ಎಸ್ ವೀರಾಜಪೇಟೆ