ಸೋಮವಾರಪೇಟೆ, ಮೇ ೨೮: ಸೋಮವಾರಪೇಟೆ ತಾಲೂಕು ಕೇಂದ್ರವಾಗಿದ್ದರೂ ಕೊರೊನಾ ಸಂಬAಧಿತ ಔಷಧಿಗಳನ್ನು ಪಡೆಯಲು ನೂತನ ಕುಶಾಲನಗರ ತಾಲೂಕಿನ ಕೂಡಿಗೆಗೆ ತೆರಳುವ ಅನಿವಾರ್ಯತೆ ಈ ಭಾಗದ ಸೋಂಕಿತರಿಗೆ ಒದಗಿದ್ದು, ಗಾಯದ ಮೇಲೆ ಮತ್ತೆ ಬರೆ ಎಳೆಯುವಂತಾಗಿದೆ.

ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯನ್ನು ಈಗಾಗಲೇ ಕೋವಿಡ್ ಹೆಲ್ತ್ಕೇರ್ ಸೆಂಟರ್ ಮತ್ತು ಸಾಮಾನ್ಯ ವಿಭಾಗವೆಂದು ವಿಂಗಡಿಸಲಾಗಿದೆ. ಗಂಟಲು ದ್ರವ ಮಾದರಿ ಸಂಗ್ರಹ ಕೇಂದ್ರವನ್ನು ಮಹಿಳಾ ಸಮಾಜ ಹಾಗೂ ಕೊರೊನಾ ಲಸಿಕೆ ನೀಡುವ ಕೇಂದ್ರವನ್ನು ಹೋಮಿಯೋಪತಿ ಆಸ್ಪತ್ರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಮಹಿಳಾ ಸಮಾಜದಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಪಡುವ ಮಂದಿಗೆ ಕೊರೊನಾ ಪಾಸಿಟಿವ್ ಬಂದರೆ ಸುಮಾರು ೨೨ ಕಿ.ಮೀ. ದೂರದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣ ದಲ್ಲಿರುವ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ಗೆ ತೆರಳಬೇಕಿದೆ. ಈಗಾಗಲೇ ಕೇರ್ ಸೆಂಟರ್‌ನಲ್ಲಿ ನೂರಾರು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಸೋಂಕು ಕಾಣಿಸಿಕೊಳ್ಳುವ ಬಹುತೇಕ ಮಂದಿ ಹೋಂ ಕ್ವಾರಂಟೈನ್‌ಗೆ ಒಳಪಡುತ್ತಿದ್ದರೂ ನೋಂದಣಿ ಹಾಗೂ ಮಾತ್ರೆಗಳನ್ನು ಪಡೆಯಲು ಕೂಡಿಗೆಗೆ ತೆರಳಲೇ ಬೇಕಿದೆ.

ಸೋಮವಾರಪೇಟೆ ಗುಡ್ಡಗಾಡು ಪ್ರದೇಶವಾಗಿದ್ದು, ಬಹುತೇಕ ಬಡ ರೈತಾಪಿ ವರ್ಗ, ಕೂಲಿ ಕಾರ್ಮಿಕ ಕುಟುಂಬಗಳೇ ಅಧಿಕವಾಗಿವೆ. ಕುಗ್ರಾಮ ಗಳಲ್ಲೂ ಸೋಂಕು ಗಣನೀಯವಾಗಿ ವ್ಯಾಪಿಸುತ್ತಿದ್ದು, ಸೋಂಕಿತರು ಸೋಮವಾರಪೇಟೆಗೆ ಬಂದು ಗಂಟಲು ದ್ರವ ನೀಡಿ ಮನೆಗೆ ತೆರಳುತ್ತಿದ್ದಾರೆ. ಮೂರು ದಿನಗಳ ನಂತರ ವರದಿ ಲಭಿಸುತ್ತಿದ್ದು, ಈ ಸಂದರ್ಭ ಪಾಸಿಟಿವ್ ಬಂದರೆ ಕೂಡಿಗೆಗೆ ತೆರಳಬೇಕಿದೆ.

ಕೆಲವೊಮ್ಮೆ ಆಂಬ್ಯುಲೆನ್ಸ್, ಖಾಸಗಿ ವಾಹನದ ವ್ಯವಸ್ಥೆಯೂ ಇಲ್ಲದೇ ಬಾಡಿಗೆ ವಾಹನದಲ್ಲಿ ತೆರಳುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಸೋಮ ವಾರಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯಿದ್ದರೂ ಇಂತಹ ಸಂದರ್ಭದಲ್ಲಿ ಈ ಭಾಗದ ಕೊರೊನಾ ಸೋಂಕಿತರ ಪ್ರಯೋಜನಕ್ಕೆ ಬಾರದಿರುವುದು ಸುತ್ತಮುತ್ತಲಿನ ಗ್ರಾಮೀಣ ಜನತೆಯ ದೌರ್ಭಾಗ್ಯವಾಗಿದೆ. ತಾಲೂಕಿನ ಕೊಡ್ಲಿಪೇಟೆ ಮೂಲೆಯಿಂದ ಹಿಡಿದು ಪುಷ್ಪಗಿರಿ, ಹೆಗ್ಗಡಮನೆ, ಬೀದಳ್ಳಿ, ಕುಡಿಗಾಣ, ಕೊತ್ತನಳ್ಳಿ, ಶಾಂತಳ್ಳಿ, ನಾಡ್ನಳ್ಳಿ, ಕುಂದಳ್ಳಿ, ಮಾದಾಪುರದ ಮಂದಿ ವಾಹನ ಸೌಕರ್ಯ ಇಲ್ಲದಿದ್ದರೂ ಎರಡರಿಂದ ಮೂರು ಬಾರಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಅಲೆದು ಕೊರೊನಾ ಪರೀಕ್ಷೆ ಮಾಡಿಸಿ ಕೊಳ್ಳುತ್ತಿದ್ದಾರೆ. ರೋಗ ಲಕ್ಷಣಗಳು ಕಾಣಿಸಿಕೊಂಡರೂ ಮನೆಯಲ್ಲಿಯೇ ನಾಲ್ಕೆöÊದು ದಿನ ಔಷಧಿ ಪಡೆಯುತ್ತಿದ್ದು, ಗುಣಮುಖರಾಗದ ಸಂದರ್ಭ ತಡವಾಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಈ ಸಂದರ್ಭ ಆರ್‌ಟಿಪಿಸಿಆರ್ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಿಸಿ ಸೋಂಕಿತ ರನ್ನು ಮನೆಗೆ ಕಳುಹಿಸಲಾಗುತ್ತದೆ.

ಮೂರು ದಿನದ ತರುವಾಯ ಪಾಸಿಟಿವ್ ಬಂದರೆ ಮತ್ತೆ ಆಸ್ಪತ್ರೆಗೆ ಕರೆತಂದು ಮಡಿಕೇರಿಗೆ ಕಳುಹಿಸಲಾಗುತ್ತಿದೆ. ಈ ಮಧ್ಯೆ ಸೋಂಕಿನ ತೀವ್ರತೆ ಕಡಿಮೆ ಇರುವ ಮಂದಿಯನ್ನು ಕೂಡಿಗೆಯ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗುತ್ತಿದೆ. ಅಲ್ಲಿ ರೋಗಿಯ ನೋಂದಣಿ ಕಾರ್ಯ ಮಾಡಿಕೊಂಡು ಮಧ್ಯಾಹ್ನ ೧೨ ಗಂಟೆಯ ನಂತರ ರಕ್ತದ ಮಾದರಿ ಪಡೆದು, ಅಗತ್ಯ ಔಷಧಿಗಳನ್ನು ನೀಡಿ ಮನೆಗೆ (ಹೋಂ ಕ್ವಾರಂಟೈನ್) ಕಳುಹಿಸುತ್ತಿದ್ದಾರೆ.

ಕೊರೊನಾ ಸೋಂಕಿತ ವ್ಯಕ್ತಿ ತನ್ನ ಸ್ನೇಹಿತರು, ಕುಟುಂಬಸ್ಥರ ಸಹಕಾರ ದಿಂದ ಕೂಡಿಗೆಗೆ ತೆರಳಿ ಔಷಧಿ ಪಡೆಯಬೇಕಿದ್ದು, ಇದು ಗ್ರಾಮೀಣ ಭಾಗದ ಮಂದಿಗೆ ಸಮಸ್ಯೆಯಾಗುತ್ತಿದೆ. ದೂರದ ಕೊಡ್ಲಿಪೇಟೆ, ಕುಂದಳ್ಳಿ, ಕೊತ್ನಳ್ಳಿ ಸೇರಿದಂತೆ ಸೋಮವಾರ ಪೇಟೆ ಭಾಗದ ಮಂದಿಗೆ ಅನುಕೂಲ ಕಲ್ಪಿಸಲು ತಾಲೂಕು ಕೇಂದ್ರವಾದ ಸೋಮವಾರ ಪೇಟೆಯಲ್ಲೇ ಕೇರ್‌ಸೆಂಟರ್ ಮತ್ತು ಮಾತ್ರೆಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೋಮವಾರಪೇಟೆಯಲ್ಲೇ ಘಟಕ ತೆರೆದರೆ ದೂರದಿಂದ ಬರುವ ರೋಗಿಗಳಿಗೆ ಅನುಕೂಲವಾಗುತ್ತದೆ. ಮಳೆಗಾಲವೂ ಪ್ರಾರಂಭವಾಗುತ್ತಿದ್ದು, ಜನರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೋಮವಾರ ಪೇಟೆಯಲ್ಲಿ ಕನಿಷ್ಟ ಔಷಧ ನೀಡುವ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

- ವಿಜಯ್