ಮಡಿಕೇರಿ, ಮೇ ೨೮: ನಗರದ ದಾಸವಾಳ ರಸ್ತೆಯಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ತ್ಯಾಜ್ಯ ಸಂಗ್ರಹಣಾ ಘಟಕವನ್ನು ನಿರ್ಮಿಸುವ ಯೋಜನೆಯನ್ನು ನಗರಸಭೆ ಕೈಗೆತ್ತಿಕೊಂಡಿದೆ. ಜನರ ಹಿತದೃಷ್ಟಿಯಿಂದ ಈ ಯೋಜನೆಯನ್ನು ನಗರದ ಹೊರ ವಲಯದಲ್ಲಿ ಅನುಷ್ಠಾನಗೊಳಿಸಬೇಕೆಂದು ನಗರಸಭಾ ಸದಸ್ಯ ಬಿ.ವೈ. ರಾಜೇಶ್ ಜಿಲ್ಲಾಧಿಕಾರಿಗಳು ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ನಗರದ ದಾಸವಾಳ ರಸ್ತೆಯಲ್ಲಿರುವ ನಗರಸಭೆಗೆ ಸೇರಿದ ಜಾಗದಲ್ಲಿ ಒಣತ್ಯಾಜ್ಯ ಸಂಗ್ರಹ ಮಾಡುವ ಘಟಕವನ್ನು ಸ್ಥಾಪಿಸುವ ಕುರಿತು ಯೋಜನೆಯನ್ನು ಕೈಗೆತ್ತಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಒಂದು ವೇಳೆ ಈ ಯೋಜನೆ ಅನುಷ್ಠಾನಗೊಂಡರೆ ಸುತ್ತಮುತ್ತಲ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಲಿದೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ನೂರಾರು ಮನೆಗಳಿವೆ, ಖಾಸಗಿ ಆಸ್ಪತ್ರೆ, ಶಿಶು ವಿಹಾರ ಕೇಂದ್ರ ಕಾರ್ಯನಿರ್ವಹಿಸುತ್ತಿದೆ, ಪ್ರಾರ್ಥನಾ ಮಂದಿರವೂ ಪಕ್ಕದಲ್ಲೇ ಇದೆ. ಇದೇ ಮಾರ್ಗವಾಗಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಇದು ನಗರದ ಹೃದಯ ಭಾಗವಾಗಿದ್ದು, ಇಲ್ಲಿ ತ್ಯಾಜ್ಯ ಸಂಗ್ರಹ ಮಾಡುವುದರಿಂದ ದುರ್ವಾಸನೆಯಿಂದ ಸೊಳ್ಳೆ, ನೊಣ, ಕ್ರಿಮಿ, ಕೀಟಗಳು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿದೆ, ಹಾಗಾಗಿ ಬದಲಿ ಜಾಗ ಹುಡುಕುವಂತೆ ಒತ್ತಾಯಿಸಿದ್ದಾರೆ.