ವೀರಾಜಪೇಟೆ, ಮೇ ೨೭: ನಕಲಿ ಕೊರೊನಾ ನೆಗೆಟಿವ್ ವರದಿ ತೋರಿಸಿ ಗಡಿಭಾಗ ಪೆರುಂಬಾಡಿ ಮೂಲಕ ಕೊಡಗು ಜಿಲ್ಲೆಗೆ ಪ್ರವೇಶಿಸುತ್ತಿದ್ದ ಮೂವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೇರಳದ ಕಣ್ಣೂರು ಜಿಲ್ಲೆಯ ಕೂಟಪೂಳೆ ನಿವಾಸಿಗಳಾದ ವಿಷ್ಣು ಪ್ರಸಾದ್ (೨೮) ಅರುಣ್ ವರ್ಗೀಸ್ (೧೯) ಮತ್ತು ನೌಷದ್ (೩೪) ಬಂಧಿತ ಆರೋಪಿಗಳು.ತಾ. ೨೬ ರಂದು ರಾತ್ರಿ ಸುಮಾರು ೮ ಗಂಟೆಯ ವೇಳೆಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯದ ಹೆದ್ದಾರಿ ಪೆರುಂಬಾಡಿ ಪೊಲೀಸ್ ತಪಾಸಣಾ ಕೇಂದ್ರದಲ್ಲಿ ನಗರ ಠಾಣೆಯ ಎ.ಎಸ್.ಐ ಬಿ.ಎಂ. ಮೊಹಮ್ಮದ್ ಮತ್ತು ಸಿಬ್ಬಂದಿ ಕೆ.ಟಿ. ನಾಣಯ್ಯ ಅವರುಗಳು ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಕೇರಳ ರಾಜ್ಯದ ಪೇರಟ್ಟದಿಂದ ಕೆಂಪು ಕಲ್ಲು ತುಂಬಿಕೊAಡು ಬಂದ ಈಚರ್ ಮಿನಿ ಲಾರಿಯನ್ನು (ಕೆಎಲ್- ೫೮ ಆರ್-೯೬೯೦) ತಪಾಸಣೆಗೆ ಒಳಪಡಿಸಿ ಕೋವಿಡ್ ನೆಗೆಟಿವ್ ವರದಿಯನ್ನು

(ಮೊದಲ ಪುಟದಿಂದ) ತೋರಿಸಲು ಕೇಳಿದಾಗ ಚಾಲಕ ವರದಿಯು ನನ್ನ ಬಳಿಯಿಲ್ಲ ಮೊಬೈಲ್ ಸಂದೇಶವಿದೆ ಎಂದು ಹೇಳಿದ್ದಾನೆ. ಮೊಬೈಲ್‌ನಲ್ಲಿ ದಾಖಲಾದ ಸಂದೇಶದ ವರದಿಯ ಐ.ಡಿ.ಯನ್ನು ಪರಿಶೀಲನೆ ನಡೆಸಿದ್ದು ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂದೇಶದ ಐ.ಡಿ.ಯನ್ನು ಕೇರಳ ಸರ್ಕಾರದ ಕೋವಿಡ್ ವೆಬ್‌ಸೈಟ್‌ನಲ್ಲಿ ಪರಿಶೀಲನೆ ನಡೆಸಿದ ವೇಳೆ ವರದಿ ನಕಲಿ ಎಂದು ತಿಳಿದು ಬಂದಿದೆ.ವಾಹನ ಚಾಲಕ ವಿಷ್ಣು ಪ್ರಸಾದ್ ಅನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ ಬಳಿಕ ಮೊಬೈಲ್‌ನಲ್ಲಿರುವ ನೆಗೆಟಿವ್ ವರದಿ ನಕಲಿ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಕಲಂ ೪೬೫, ೪೬೮, ೪೭೧,ರೆ/ವಿ ೩೪ ಐ.ಪಿ.ಸಿ ಮತ್ತು ಕಲಂ ೪,೫ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ ೨೦೨೦ ರಂತೆ ಪ್ರಕರಣ ದಾಖಲಿಸಲಾಗಿದೆ. ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣದ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.

-ಕೆ.ಕೆ.ಎಸ್