ಮಡಿಕೇರಿ, ಮೇ ೨೭: ಕೊಡಗು ಹೇಗೆ ಮಲೆನಾಡಿನ ಒಂದು ಪ್ರಮುಖ ತಾಣವಾಗಿದೆಯೋ, ಈ ನಮ್ಮ ಪ್ರಕೃತಿಯ ಬೀಡು ಮಾನವ-ವನ್ಯಜೀವಿ ಸಂಘರ್ಷದ ನೆಲೆಬೀಡೂ ಆಗಿದೆ. ಹೆಚ್ಚುತ್ತಿರುವ ವನ್ಯಜೀವಿ ಸಂಘರ್ಷವು ಮಾನವನಿಗೂ ಹಾಗೂ ಈ ಭೂಮಿಯ ಮೇಲೆ ನಮ್ಮಷ್ಟೇ ಹಕ್ಕಿರುವ ವನ್ಯಜೀವಿಗಳಿಗೂ ಮಾರಕವಾಗಿ ಪರಿಣಮಿಸಿದೆ. ಈ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸದ್ಯಕ್ಕೆ ಲಭ್ಯವಿಲ್ಲವಾದರೂ, ಈ ಸಂಘರ್ಷವನ್ನು ಹೆಚ್ಚಿನ ಮಟ್ಟಿಗೆ ತಡೆಗಟ್ಟುವ ಸಂಪನ್ಮೂಲಗಳೂ, ವೈಜ್ಞಾನಿಕ ಮಾರ್ಗಗಳೂ ನಮ್ಮಲ್ಲಿವೆ. ಆದರೆ, ವಿಪರ್ಯಾಸವೆಂದರೆ, ಪರಿಸ್ಥಿತಿ ಕೈಮೀರಿ ಹೋದಾಗ ಮಾತ್ರ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುವದು ಕೊಡಗಿನ ದೌರ್ಭಾಗ್ಯವಾಗಿದೆ. ಮಾನವನು ವನ್ಯ ಪ್ರಾಣೆ ಧಾಳಿಗೆ ಬಲಿಯಾದಾಗ ಅದಕ್ಕೆ ಕಾರಣವಾದ ಪ್ರಾಣಿಯ ಬಲಿಯಷ್ಟೇ ಸಮಸ್ಯೆಗೆ ಪರಿಹಾರವಾಗಿ ಅಭಿಪ್ರಾಯ ಮೂಡುತ್ತಿರುವದು ವಿಪರ್ಯಾಸವೇ ಸರಿ.

ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ಹೆಜ್ಜೆ ಸಪ್ಪಳ ಇತ್ತೀಚೆಗಷ್ಟೇ ಮಿತಿಮೀರಿದೆಯಾದರೂ, ಆನೆಗಳ ಸಪ್ಪಳ ದಶಕಗಳಿಂದಲೂ ಕೇಳಿಬರುತ್ತಿವೆ. ಆನೆ-ಮಾನವ ಸಂಘರ್ಷದಲ್ಲಿ ನೂರಾರು ಕಾರ್ಮಿಕರು ಸಾವನ್ನಪ್ಪಿದ್ದಾರಲ್ಲದೆ, ಆನೆಗಳೂ ಹಲವಾರು ಸನ್ನಿವೇಶಗಳಲ್ಲಿ ಸಾವಿಗೀಡಾಗಿವೆ. ರೈಲ್ವೆ ಬ್ಯಾರಿಕೇಡ್, ಆನೆ ಕಂದಕ...ಹೀಗೆ ಕೆಲವೊಂದು ತಡೆ ಮಾಡುವ ಪರಿಹಾರ ಕ್ರಮಗಳು ಈ ಸಂಘರ್ಷವನ್ನು ತಡೆಗಟ್ಟುತ್ತಿವೆ. ಆದರೆ, ಕಾಡುಗಳಿಗಿಂತ ಹೆಚ್ಚಾಗಿ ತೋಟಗಳಲ್ಲಿಯೇ ಬೀಡುಬಿಟ್ಟಿರುವ ಆನೆಗಳ ಸಂಖ್ಯೆ ಕೊಡಗಿನಲ್ಲಿ ಹೆಚ್ಚಾಗಿದ್ದು, ಇಂತಹ ಆನೆಗಳನ್ನು ಪತ್ತೆಹಚ್ಚಿ ಅವುಗಳಿಗೆ ರೇಡಿಯೋ ಕಾಲರ್‌ಗಳನ್ನು ಅಳವಡಿಸುವದು ಅತ್ಯಂತ ಅವಶ್ಯಕವಾಗಿದೆ. ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಗುರುತಿಸಿ, ಅವುಗಳ ಗುಂಪಿನ ಮುಂದಾಳು ಆನೆಯೊಂದಕ್ಕೆ ರೇಡಿಯೋ ಕಾಲರ್ ಅಳವಡಿಸಿದ್ದೇಯಾದರೆ ಈ ಆನೆಗಳ ಹಿಂಡನ್ನು ಸಕಾಲಿಕವಾಗಿ ಪತ್ತೆಮಾಡಬಹುದಾಗಿದೆಯಲ್ಲದೆ, ಇದರಿಂದ ಆನೆಗಳಿಂದಾಗುವ ಪ್ರಾಣ ಹಾನಿ ಹಾಗೂ ಬೆಳೆಹಾನಿ ಯನ್ನೂ ನಿಯಂತ್ರಿಸಬಹುದಾಗಿದೆ.

(ಮೊದಲ ಪುಟದಿಂದ) ನಿಷ್ಕಿçಯಗೊಂಡ ಯೋಜನೆ : ಕೊಡಗಿನಲ್ಲಿ ೨೦೧೨ ರಲ್ಲಿ ಸುಮಾರು ೬ ಆನೆಗಳಿಗೆ ಈ ರೇಡಿಯೋ ಕಾಲರ್ ಗಳನ್ನು ಅಳವಡಿಸಲಾಗಿತ್ತಾದರೂ, ಇವು ಕೇವಲ ಆರು ತಿಂಗಳಲ್ಲಿ ನಿಷ್ಕಿçಯ ವಾದವು. ಆ ರೇಡಿಯೋ ಕಾಲರ್‌ಗಳು ಜಿ.ಎಸ್.ಎಂ. ಸಿಮ್‌ನಿಂದ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಆಧುನಿಕ ರೇಡಿಯೋ ಕಾಲರ್‌ಗಳು ಸ್ಯಾಟಲೈಟ್ ಮೂಲಕ ಕಾರ್ಯ ನಿರ್ವಹಿಸುತ್ತವೆÉಯಲ್ಲದೆ, ಇವುಗಳು ಹೆಚ್ಚಿನ ನಿಖರತೆಯನ್ನು ಹೊಂದಿರುತ್ತವೆ. ಈ ಆಧುನಿಕ ತಂತ್ರಜ್ಞಾನದ ಕಾಲರ್‌ಗಳು ಸುಮಾರು ಮೂರು ವರ್ಷಗಳವರೆಗೆ ಕ್ರಿಯಾತ್ಮಕವಾಗಿರುತ್ತವೆ. ಆನೆಗಳಿಗೆ ಈ ಕಾಲರ್‌ಗಳನ್ನು ಅಳವಡಿಸಿ ಸರಿಯಾಗಿ ನಿರ್ವಹಣೆ ಮಾಡಿದ್ದೇಯಾದಲ್ಲಿ, ಆನೆಗಳಿರುವ ಜಾಗದ ಸುಳಿವನ್ನು ನಿಮಿಷದಲ್ಲೇ ಒದಗಿಸುತ್ತವೆ.

೨೦೧೫-೧೬ನೇ ಸಾಲಿನಲ್ಲಿ ಈ ಆಧುನಿಕ ರೇಡಿಯೋ ಕಾಲರ್‌ಗಳನ್ನು ಕೊಡಗಿನಲ್ಲಿ ಹೆಚ್ಚಾಗಿ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡಿನ ಮುಂದಾಳುವಿಗೆ ಅಳವಡಿಸಲು ಕೊಡಗಿನ ಅರಣ್ಯ ವಿಭಾಗದಿಂದ ಮನವಿ ಸಲ್ಲಿಸಲಾಗಿ, ಈ ಮನವಿಗೆ ೨೦೧೯ರಲ್ಲಿ ಹಸಿರು ನಿಶಾನೆ ದೊರಕಿತು. ಮುಂದುವರೆದು, ರಾಜ್ಯ ಸರಕಾರ ೨೦ ರೇಡಿಯೋ ಕಾಲರ್‌ಗಳನ್ನು ಆನೆ-ಮಾನವ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಉಪಯೋಗಿಸಲು ಅರಣ್ಯ ಇಲಾಖೆಗೆ ನೀಡಿತು. ಆದರೆ, ಈವರೆಗೆ ಕೇವಲ ಎಂಟು ರೇಡಿಯೋ ಕಾಲರ್‌ಗಳ ಬಳಕೆಯಾಗಿದ್ದು - ಹಾಸನ ಹಾಗೂ ಕೊಡಗು ಜಿಲ್ಲೆಗಳ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಗೆ ಅಳವಡಿಸಲಾಗಿದೆಯೇ ಹೊರತು, ಸುಮಾರು ೧.೫ ಲಕ್ಷ ಬೆಲೆಬಾಳುವ ೧೨ ರೇಡಿಯೋ ಕಾಲರ್‌ಗಳು ಉಪಯೋಗಕ್ಕೆ ಇನ್ನೂ ಬಂದಿರುವದಿಲ್ಲ.

ತೋಟಗಳಲ್ಲಿ ಆನೆಗಳ ನೆಲೆ

“ದಕ್ಷಿಣ ಕೊಡಗಿನಲ್ಲಿ ಅನೇಕ ಕಾಡಾನೆಗಳು ಕಾಫಿ ತೋಟಗಳಲ್ಲೇ ಬೀಡುಬಿಟ್ಟು ಪ್ರಾಣ ಹಾನಿ ಹಾಗೂ ಬೆಳೆಹಾನಿಗೆ ಕಾರಣವಾಗುತ್ತಿವೆ. ಇಂತಹ ಪುಂಡಾನೆಗಳ ಗುಂಪನ್ನು ಅರಣ್ಯ ಇಲಾಖೆ ಗುರುತಿಸಿ ಅವುಗಳಿಗೆ ರೇಡಿಯೋ ಕಾಲರ್‌ಗಳು ಅಳವಡಿಸಿದಲ್ಲಿ, ಹೆಚ್ಚಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಸರಕಾರದ ಬಳಿ ರೇಡಿಯೋ ಕಾಲರ್‌ಗಳು ಇದ್ದರೂ ಕೂಡ, ಕೊಡಗಿನ ಅರಣ್ಯ ಅಧಿಕಾರಿಗಳು ಇವನ್ನು ಯಾಕೆ ಸದ್ಬಳಕೆ ಮಾಡುತ್ತಿಲ್ಲ?” ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ, ಕೆ.ಕೆ. ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಲಭ್ಯವಿರುವ ೨೦ ರೇಡಿಯೋ ಕಾಲರ್‌ಗಳಲ್ಲಿ, ಕೊಡಗಿನಲ್ಲಿ ಈವರೆಗೆ ಕೇವಲ ನಾಲ್ಕು ಆನೆಗಳಿಗೆ ಕಾಲರ್‌ಗಳು ಅಳವಡಿಸಲಾಗಿದೆ. ಇದರಲ್ಲಿ ಮೂರು ಆನೆಗಳಿಗೆ ೨೦೧೨ರಲ್ಲಿ ಅಳವಡಿಸಿದ್ದ ಹಳೆಯ ಕಾಲರ್‌ಗಳ ಬದಲಾವಣೆಯಷ್ಟೇ ಆಗಿದೆ. ಇನ್ನೂ ಮೂರು ಆನೆಗಳ ಕಾಲರ್‌ಗಳು ಬದಲಾವಣೆಗೆ ಬಾಕಿ ಇರುತ್ತದೆಯಾದರೂ, ಈ ಬಗ್ಗೆ ಯಾವದೇ ಪ್ರಯತ್ನ ಅರಣ್ಯ ಇಲಾಖೆಯಿಂದ ನಡೆಯುತ್ತಿಲ್ಲ.

ಇದಲ್ಲದೆ, ಅರಣ್ಯ ಇಲಾಖೆ ಈ ರೇಡಿಯೋ ಕಾಲರಿಂಗ್‌ಗೆ ಯಾವದೇ ಖರ್ಚುವೆಚ್ಚ ಭರಿಸಬೇಕಾಗಿಲ್ಲ. ಇದಕ್ಕಾಗಿ ‘ವೈಲ್ಡ್ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ”ದ ಮೂಲಕ ಕಾರ್ಯಯೋಜನೆಗೆ ತರಲು ಅನುಮತಿಯೂ ದೊರೆತಿದೆ. ಒಂದು ಗುಂಪಿನ ಮುಂದಾಳು ಆನೆಗೆ ಈ ಕಾಲರ್ ಅನ್ನು ಅಳವಡಿಸಿದಲ್ಲಿ, ಗುಂಪಿನ ಸುಮಾರು ೪೦ ಆನೆಗಳನ್ನು ಅಗತ್ಯ ಸಮಯದಲ್ಲಿ ನಿರ್ವಹಣೆ ಹಾಗೂ ಪತ್ತೆ ಮಾಡಲು ಸುಲಭವಾಗುತ್ತದೆ. ನಿರ್ವಹಣಾ ಕಾರ್ಯವನ್ನೂ ವೈಲ್ಡ್ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಬ್ಬಂದಿಗಳೇ ನೆರವೇರಿಸಲು ಸಿದ್ದರಿದ್ದಾರಲ್ಲದೆ, ಈ ಮಾಹಿತಿಯನ್ನು ರ‍್ಯಾಪಿಡ್ ರೆಸ್‌ಪಾನ್ಸ್ ಟೀಮ್ (ಆರ್.ಆರ್.ಟಿ.) ಹಾಗೂ ಇನ್ನಿತರ ಸುತ್ತಮುತ್ತಲ ಬೆಳೆಗಾರರಿಗೆ ಆನೆಗಳ ಚಲನವಲನದ ಬಗ್ಗೆ ಒದಗಿಸಲಾಗುವದರಿಂದ ಪ್ರಾಣಹಾನಿ ತಡೆಗಟ್ಟಲು ವೈಜ್ಞಾನಿಕ ಪರಿಹಾರ ದೊರಕಿದಂತಾಗುತ್ತದೆ.

ಈ ಎಲ್ಲಾ ಸಂಪನ್ಮೂಲಗಳು ಅರಣ್ಯ ಇಲಾಖೆಗೆ ಲಭ್ಯವಿದ್ದು, ಸಂಘರ್ಷಗೊಳ್ಳುವ ಆನೆಗಳ ಗುಂಪನ್ನು ಗುರುತಿಸಿ, ಮುಂದಾಳು ಆನೆಗಳಿಗೆ ಕಾಲರ್ ಅಳವಡಿಸಲು ಕೊಡಗಿನ ಉಪಅರಣ್ಯ ಸಂರಕ್ಷಣಾಧಿಕಾರಿ ಯವರು ಅನುಮತಿ ಕೋರಿ ಕೇವಲ ಒಂದು ಮನವಿಯನ್ನು ರಾಜ್ಯಕ್ಕೆ ಸಲ್ಲಿಸಬೇಕಾಗಿದೆ. ಆದರೆ, ಈ ಪ್ರಸ್ತಾವನೆಯನ್ನು ಸಲ್ಲಿಸುವಲ್ಲಿಯೂ ಕೊಡಗಿನ ಅರಣ್ಯ ಅಧಿಕಾರಿಗಳು ತಾತ್ಸಾರ ತೊರುತ್ತಿರುವದು ‘ಶಕ್ತಿ’ಯ ಗಮನಕ್ಕೆ ಬಂದಿದೆ.

ಈ ಬಗ್ಗೆ ವಿವರಣೆ ಕೋರಿದಾಗ, ವೀರಾಜಪೇಟೆ ಉಪ ಸಂರಕ್ಷಣಾಧಿಕಾರಿ ಚಕ್ರಪಾಣಿಯವರು, “ಆರು ಆನೆಗಳ ರೇಡಿಯೋ ಕಾಲರ್‌ಗಳನ್ನು ಬದಲಾಯಿಸಲು ಈಗಾಗಲೆ ಅನುಮತಿ ದೊರೆತಿದೆ. ಅದರಲ್ಲಿ ಮೂರು ಆನೆಗಳ ಕಾಲರ್‌ಗಳನ್ನು ಬದಲಾಯಿಸಲಾಗಿದೆ. ಆನೆಗಳ ಮಾಹಿತಿ ದೊರೆತಾಗ ನಾವು ಇದನ್ನು ಪೂರ್ಣಗೊಳಿಸುತ್ತೇವೆ,” ಎಂದು ತಿಳಿಸಿದರು. ಇನ್ನು ಹೊಸ ಆನೆಗಳಿಗೆ ಕಾಲರಿಂಗ್ ಮಾಡಲು ಅನುಮತಿ ಕೋರುವ ಕುರಿತು ಸ್ಪಷ್ಟ ಮಾಹಿತಿಯನ್ನು ಅಧಿಕಾರಿ ನೀಡಲಿಲ್ಲ. ಈ ಬಗ್ಗೆ ಜಿಲ್ಲಾ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ತಾಕತ್ ಸಿಂಗ್ ರಣಾವತ್ ಅವರಿಂದ ಮಾಹಿತಿ ಬಯಸಿದಾಗ, ಈ ಬಗ್ಗೆ ಉಪಸಂರಕ್ಷಣಾಧಿಕಾರಿಯವರೊAದಿಗೆ ಚರ್ಚಿಸುವದಾಗಿ ತಿಳಿಸಿದರು. ಇಲಾಖೆಯಲ್ಲಿ ಆನೆ- ಮಾನವ ಸಂಘರ್ಷವನ್ನು ತಡೆಗಟ್ಟುವ, ಹೆಚ್ಚಾಗಿ ಈ ಸಂಘರ್ಷಕ್ಕೆ ಬಲಿಯಾಗುತ್ತಿರುವ ಅಮಾಯಕ ತೋಟ ಕಾರ್ಮಿಕರನ್ನು ರಕ್ಷಿಸುವ ಅವಕಾಶವುಳ್ಳ ಪರಿಹಾರೋಪಾಯ ಹಾಗೂ ಸಂಪನ್ಮೂಲಗಳು ಲಭ್ಯವಿದ್ದರೂ, ಈ ದಿಸೆಯಲ್ಲಿ ಕೊಡಗಿನ ಅರಣ್ಯ ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವದು ಇಲಾಖೆಯ ದಿವ್ಯ ನಿರ್ಲಕ್ಷö್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.