ಕುಶಾಲನಗರ, ಮೇ ೨೫: ಕುಶಾಲನಗರ ಪಟ್ಟಣದ ವರ್ತಕರಿಗೆ ಗಂಟಲು ದ್ರವ ಪರೀಕ್ಷೆ ನಡೆಸಲು ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಕೇಂದ್ರ ತೆರೆಯಲು ಪಟ್ಟಣ ಪಂಚಾಯತಿ ಕ್ರಮ ಕೈಗೊಂಡಿದೆ.

ಕಡ್ಡಾಯವಾಗಿ ವರ್ತಕರು ಕೊರೊನಾ ನೆಗೆಟಿವ್ ವರದಿ ಪ್ರದರ್ಶನ ಮಾಡುವ ಸಲುವಾಗಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನೂರಾರು ವರ್ತಕರು ಕೇಂದ್ರದ ಬಳಿ ಸೇರಿದಾಗ ಗೊಂದಲ ಸೃಷ್ಟಿಯಾದ ಕಾರಣ ಪಟ್ಟಣ ಪಂಚಾಯತಿ ಆಡಳಿತ ತುರ್ತು ಕ್ರಮ ಕೈಗೊಂಡಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಜೈವರ್ಧನ್ ತಿಳಿಸಿದ್ದಾರೆ.

ರೈತ ಸಹಕಾರ ಕೇಂದ್ರ ಆವರಣದಲ್ಲಿ ಅಂದಾಜು ೨೫೦ ಕ್ಕೂ ಅಧಿಕ ವ್ಯಾಪಾರಿಗಳು ಗಂಟಲು ದ್ರವ ಪರೀಕ್ಷೆ ಮಾಡಿಸಲು ಬಂದು ಸೇರಿದ ಸಂದರ್ಭ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳು ಇರುವ ಸಂಶಯ ವ್ಯಕ್ತಪಡಿಸಿದ ವರ್ತಕರು ತಮಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆಯುವಂತೆ ಮನವಿ ಮಾಡಿದರು.

ಇದನ್ನು ಗಮನಿಸಿ ಕುಶಾಲನಗರ ಖಾಸಗಿ ಬಸ್ ನಿಲ್ದಾಣದ ಆವರಣ ದಲ್ಲಿ ಬುಧವಾರದಿಂದ (ಇಂದು) ಬೆಳಗ್ಗೆ ೧೦. ರಿಂದ ಸಂಜೆ ೩ ರ ತನಕ ವರ್ತಕರಿಗೆ ಗಂಟಲು ದ್ರವ ಪರೀಕ್ಷಾ ಕೇಂದ್ರ ತೆರೆಯಲು ನಿರ್ಧರಿಸಲಾಯಿತು ಎಂದು ಜೈವರ್ಧನ್ ತಿಳಿಸಿದ್ದಾರೆ.