ಮಡಿಕೇರಿ, ಮೇ ೨೫: ಕನ್ನಡ ಚಳವಳಿ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯ ವಾಗಿರುವ ಬೆಂಗಳೂರಿನ ‘ಸ್ವಾಭಿಮಾನಿ ಕರ್ನಾಟಕ ವೇದಿಕೆ’ ತನ್ನ ೨೦ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಸ್ವಾಭಿಮಾನಿ ಪುಸ್ತಕ ಬಹುಮಾನ ಪುರಸ್ಕಾರಕ್ಕೆ ಡಾ. ಮಿರ್ಜಾ ಬಷೀರ್ ಅವರ ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾಸಂಕಲನ, ಮಂಜುಳಾ ಹಿರೇಮಠ ಅವರ ‘ಗಾಯಗೊಂಡ ವರಿಗೆ’ ಕಥಾಸಂಕಲನ, ಸ್ಮಿತಾ ಅಮೃತರಾಜ್ ಅವರ ‘ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನ, ಜಾಣಗೆರೆ ವೆಂಕಟರಾಮಯ್ಯ ಅವರ ‘ಜಲಯುದ್ಧ’ ಕಾದಂಬರಿ ಹಾಗೂ ಸಂಕೀರ್ಣ ವಿಭಾಗದಲ್ಲಿ ಕಾ.ತ. ಚಿಕ್ಕಣ್ಣ ಅವರ ‘ಕಣ್ಣಂಚಿನ ನೆಳಲು’ ಕೃತಿಗಳು ಆಯ್ಕೆಯಾಗಿವೆ.

ಸ್ಪರ್ಧೆಗೆ ೨೦೨೦ ರಲ್ಲಿ ಪ್ರಕಟವಾದ ೧೫೦ ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ಅವುಗಳಲ್ಲಿ ಅತ್ಯುತ್ತಮವಾದ ೫ ಕನ್ನಡ ಕೃತಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ರೂ. ೫ ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ, ಹಿರಿಯ ಲೇಖಕ ದ್ವಾರನಕುಂಟೆ ಪಾತಣ್ಣ ಹಾಗೂ ಪತ್ರಕರ್ತ ರಘುನಾಥ ಚ.ಹ. ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಕೋವಿಡ್-೧೯ ಬಿಕ್ಕಟ್ಟು ತಿಳಿಯಾದ ನಂತರ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.