ವಿದ್ಯಾರ್ಥಿಗಳಿಲ್ಲದ ಶಿಕ್ಷಣ ಸಂಸ್ಥೆಗಳು ಮಮ್ಮಲ ಮರುಗುತಿದೆ.... ಅನಾಥವಾಗಿವೆ

........

ಕೊರೊನಾದ ಒಂದನೇ ಅಲೆ ಮುಗಿದು ತಕ್ಕಮಟ್ಟಿಗೆ ಸಮಸ್ಯೆ ಪರಿಹಾರ ಆಗಿ ೨೦೨೧ ಜನವರಿ ಯಿಂದ ಮಕ್ಕಳು ಅತೀ ಉತ್ಸಾಹ ದಿಂದ ಶಾಲೆಗೆ ಬಂದು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಗುರುಗಳು ಅಷ್ಟೇ ಉತ್ಸಾಹದಿಂದ ಶಕ್ತಿಮೀರಿ ಪ್ರಯತ್ನಪಟ್ಟು ಗುಣಮಟ್ಟದ ಕಲಿಕೆಯತ್ತ ಸಾಗುವುದರೊಳಗೆ, ಊಹಿಸಲೂ ಸಾಧ್ಯವಾಗದಷ್ಟು ವೇಗದಲ್ಲಿ ಎರಡನೇ ಅಲೆ ಶಿಕ್ಷಣ ವ್ಯವಸ್ಥೆಗೆ ಅಪ್ಪಳಿಸಿದೆ.

ಬೇರೆಲ್ಲಾ ಕ್ಷೇತ್ರಗಳಿಗೆ ಹೋಲಿಸಿ ದರೆ, ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ, ಮಕ್ಕಳ ಬದುಕು ಕಲಿಕೆ ಯೋಗಕ್ಷೇಮದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಕಲಿಕೆ ಕೇವಲ ಓದು ಬರಹಕ್ಕೆ ಸೀಮಿತವಾಗದೆ, ಮಗು ತನ್ನ ಜ್ಞಾನ ವನ್ನು ರಚನಾತ್ಮಕವಾಗಿ ಕಟ್ಟಿ ಕೊಳ್ಳುವ, ತನ್ನ ಸ್ನೇಹಿತರೊಡನೆ ಒಡನಾಡುವ ಸಂವಾದ ಮಾಡುವ, ತಿಳಿದ ವಿಷಯಗಳನ್ನು ಪರಸ್ಪರ ವಿನಿಮಯ ಮಾಡುವ, ಜ್ಞಾನ ವಿಸ್ತರಿಸಿಕೊಳ್ಳುವ, ಪಡೆದ ಜ್ಞಾನವನ್ನು ಗುರು ಸ್ನೇಹಿತರೊಂದಿಗೆ ಅನ್ವಯಿಸಿ ನೋಡುವ, ಹೀಗೆ ಹಲವಾರು ಅವಕಾಶಗಳನ್ನು ಶಿಕ್ಷಣ ವ್ಯವಸ್ಥೆ ಮಗುವಿಗೆ ಕಟ್ಟಿಕೊಡುತ್ತದೆ. ಆದರೆ ಇಂದು ಇದೆಲ್ಲಾ ಬರೀ ಕನಸಿನಂತೆ ಗೋಚರಿಸುತ್ತದೆ.

ಒಂದು ಶಿಕ್ಷಣ ವ್ಯವಸ್ಥೆಯಿಂದ ಕೇವಲ ಜ್ಞಾನ ಮಾತ್ರವಲ್ಲದೆ, ನಾಗರಿಕ ಬದುಕಿಗೆ ಬೇಕಾದ ಸಾಮಾಜಿಕರಣ, ಸಹಬಾಳ್ವೆ, ಸಹಭಾಗಿತ್ವ, ಸಹಿಷ್ಣುತೆ, ಭ್ರಾತೃತ್ವ, ಇತ್ಯಾದಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿಸುವ ಧ್ಯೇಯೋದ್ದೇಶ ಶಿಕ್ಷಣ ವ್ಯವಸ್ಥೆಯ ದಾಗಿದೆ. ಆದರೆ ಇಂದು, ವಿದ್ಯಾರ್ಥಿ ಗಳು ಇಲ್ಲದ ಶಿಕ್ಷಣ ಸಂಸ್ಥೆ, ಮಮ್ಮಲ ಮರುಗುತಿದೆ. ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಟ್ಟ ಶಿಕ್ಷಣ ಸಂಸ್ಥೆಗಳು ಅನಾಥವಾಗಿವೆ.

ಆನ್‌ಲೈನ್ ಶಿಕ್ಷಣ ಕೇವಲ ಪರೀಕ್ಷೆಗೆ ಅಷ್ಟೇ ಸೀಮಿತವಾಗಿದೆ. ಮಗುವಿನ ಜ್ಞಾನ ಸಾಮರ್ಥ್ಯ ಪ್ರತಿಭೆ ಸರ್ವತೋಮುಖ ಅಭಿವೃದ್ಧಿ ಇಲ್ಲಿ ಅನಾವರಣಗೊಳ್ಳುವುದು ಇಲ್ಲ. ಮಕ್ಕಳ ಕಲಿಕೆ, ಭಯ ಅಘಾತ, ಆತಂಕ ರಹಿತವಾಗಿರಬೇಕು. ಹಳ್ಳಿಗಾಡಿನ ಮಕ್ಕಳಿಗೆ ಇದರಿಂದ ಯಾವುದೇ ಲಾಭ ಇಲ್ಲ. ಮಗು ಒಂದು ವರ್ಷ ಆನ್‌ಲೈನ್ ಶಿಕ್ಷಣ ಗಳಿಸಿದರೂ ವಯಸ್ಸು ಹಾಗೂ ತರಗತಿಗೆ ಅನುಗುಣವಾದ ಕಲಿಕಾ ಮಟ್ಟವನ್ನು ತಲುಪಲು ಸಾಧ್ಯವಿಲ್ಲ. ತನ್ನದಲ್ಲದ ತಪ್ಪಿಗೆ ಮಗುವನ್ನು ಆನ್‌ಲೈನ್ ಶಿಕ್ಷಣದ ಮೊರೆ ಹೋಗಲು ಒತ್ತಾಯಿಸಿ ಶಿಕ್ಷಿಸುವ ಬದಲು, ವ್ಯವಸ್ಥೆಯ ಗುಣಮಟ್ಟ ವನ್ನು ಸುಧಾರಿಸಲು ಪ್ರಯತ್ನಿಸ ಬೇಕು.

ಈಗಿನ ಪರಿಸ್ಥಿತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಕೋವಿಡ್‌ನಿಂದ ಹಲವಾರು ಕುಟುಂಬಗಳು ಆರ್ಥಿಕವಾಗಿ ಬಲಹೀನಗೊಂಡು ಶಾಲೆಗಳನ್ನು ಬದಲಾಯಿಸುವ ಸ್ಥಿತಿ ವಿದ್ಯಾರ್ಥಿ ಗಳಿಗೆ ಬಂದಿದೆ. ಇದರಿಂದ ಮಕ್ಕಳು ಮಾನಸಿಕವಾಗಿ ನೊಂದಿದ್ದಾರೆ. ಅಕ್ಷರ ದಾಸೋಹ ದಂತಹ ಕಾರ್ಯಕ್ರಮದಿಂದ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ವಿಟಮಿನ್ ಟ್ಯಾಬ್ಲೆಟ್ ಇತ್ತು ಅದು ಇಲ್ಲದಾಗಿದೆ. ಮನೆ ಪಾಠಶಾಲೆ ಎಂಬ ವ್ಯವಸ್ಥೆ ಮಾಡಲು ಹೋದರೆ ಎಲ್ಲಾ ಪೋಷಕರು ವಿದ್ಯಾವಂತರಲ್ಲ ಎಂಬುದೂ ಗಮನಾರ್ಹ.