ಶನಿವಾರಸಂತೆ, ಮೇ ೨೩: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್, ಸದಸ್ಯರುಗಳಾದ ಎಸ್.ಎನ್. ರಘು, ಸರ್ದಾರ್ ಅಹಮದ್, ಆದಿತ್ಯಗೌಡ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ದಿಢೀರ್ ಭೇಟಿ ನೀಡಿ ಕೆಲವು ಸಿಬ್ಬಂದಿಗಳ ಬೇಜವಾಬ್ದಾರಿ ಕೆಲಸದ ಬಗ್ಗೆ ವೈದ್ಯರುಗಳ ಗಮನ ಸೆಳೆದು ರೋಗಿಗಳೊಂದಿಗೆ ವಿನಯವಾಗಿ ನಡೆದುಕೊಳ್ಳುವಂತೆ ಸೂಚಿಸಿದರು.
ಆಸ್ಪತ್ರೆಯ ವೈದ್ಯರುಗಳು ಮತ್ತು ಆಡಳಿತಾಧಿಕಾರಿಗಳೊಂದಿಗೆ ಆಸ್ಪತ್ರೆಯ ಕುಂದುಕೊರತೆ ಬಗ್ಗೆ ಚರ್ಚಿಸಿ, ಎಕ್ಸ್-ರೇ ಹಾಗೂ ಇಸಿಜಿ ಟೆಕ್ನೀಷಿಯನ್ ಅವರುಗಳನ್ನು ನೇಮಕ ಮಾಡಿ, ಇವರ ಸೇವೆ ಸಾರ್ವಜನಿಕರಿಗೆ ಲಭಿಸುವಂತೆ ಸದಸ್ಯ ಎಸ್.ಎನ್. ರಘು ಅವರು ಶಾಸಕ ಅಪ್ಪಚ್ಚುರಂಜನ್ ಅವರಿಗೆ ದೂರವಾಣಿ ಮುಖಾಂತರ ಕೇಳಿಕೊಂಡ ಮೇರೆಗೆ ಶಾಸಕರು ಪರಿಶೀಲಿಸಿ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಕೆಲವರ ಅನುಚಿತ ವರ್ತನೆ ಬಗ್ಗೆ ಸದಸ್ಯ ಸರ್ದಾರ್ ಅಹಮದ್ ಗಮನ ಸೆಳೆದು ಈ ಸಮಯದಲ್ಲಿ ಜನರಿಗೆ ತೊಂದರೆ ಕೊಡದೆ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಕೋವಿಡ್ ರೋಗಿಗಳ ಕುಂದುಕೊರತೆ ಬಗ್ಗೆ ವಿಚಾರಿಸಿ ಖಖಿPಅಖ ಹಾಗೂ ರ‍್ಯಾಪಿಡ್ ಟೆಸ್ಟ್ಗಳನ್ನು ಮನೆ ಮನೆಗೂ ಹೋಗಿ ಪರೀಕ್ಷೆ ಮಾಡುವಂತೆ ಹಾಗೂ ಆಶಾಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿಗಳು ಕೋವಿಡ್ ರೋಗಿಗಳಿರುವ ಸುತ್ತಮುತ್ತಲ ಪ್ರದೇಶ ಪರಿಶೀಲಿಸಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿ ಸದಸ್ಯರು ತಿಳಿಸಿದರು. ಈ ಸಂದರ್ಭ ವೈದ್ಯಾಧಿಕಾರಿ ಡಾ. ಇಂದೂದರ್, ಡೆಂಟಲ್ ವೈದ್ಯ ಡಾ. ಬಿಪಿನ್, ದಾದಿಯರು ಹಾಗೂ ಆಶಾಕಾರ್ಯಕರ್ತರು, ಸಿಬ್ಬಂದಿಗಳು ಹಾಜರಿದ್ದರು.