ಗೋಣಿಕೊಪ್ಪಲು, ಮೇ ೨೩: ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕೀರೆಹೊಳೆಯ ಹೂಳೆತ್ತುವ ಕಾಮಗಾರಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಕೊಣಿಯಂಡ ಅಪ್ಪಣ್ಣ ಪರಿಶೀಲನೆ ನಡೆಸಿದರು.
ಪಂಚಾಯಿತಿಯಲ್ಲಿ ಮೀಸಲಿಟ್ಟ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಹೂಳೆತ್ತುವ ಕಾರ್ಯ ನಡೆಸಲು ಇಒ ಅಪ್ಪಣ್ಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮಯ್ಯ ಅವರಿಗೆ ಸೂಚನೆ ನೀಡಿದರು.
ಕೀರೆಹೊಳೆಯ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಕಾಮಗಾರಿ ನಡೆಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಸಮೀಪದ ಬಾಳಾಜಿ ಗ್ರಾಮದವರೆಗೂ ಕಾಮಗಾರಿ ನಡೆಸಲು ಸೂಚನೆ ನೀಡಿದರು. ಇದರಿಂದಾಗಿ ಕೀರೆಹೊಳೆಯಲ್ಲಿ ಹರಿಯುವ ನೀರು ಸರಾಗವಾಗಿ ಹರಿದು ಕಾನೂರು ಬಳಿಯ ಲಕ್ಷö್ಮಣತೀರ್ಥ ನದಿಯನ್ನು ಸೇರಲು ಅವಕಾಶವಾಗಲಿದೆ. ಇದರಿಂದಾಗಿ ಮುಂದೆ ಪ್ರವಾಹ ಎದುರಾಗುವ ಸಾಧ್ಯತೆ ಕಡಿಮೆಯಾಗಲಿದೆ. ಆ ನಿಟ್ಟಿನಲ್ಲಿ ಹೂಳೆತ್ತುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ‘ಶಕ್ತಿ’ಗೆ ಇಒ ಅಪ್ಪಣ್ಣ ಮಾಹಿತಿ ತಿಳಿಸಿದರು.
ಇಒ ಭೇಟಿಯ ವೇಳೆ ಪಂಚಾಯಿತಿ ಪಿಡಿಓ ತಿಮ್ಮಯ್ಯ, ಸದಸ್ಯರಾದ ಪ್ರಭಾವತಿ ಮಹೇಶ್, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.