ಪೊನ್ನಂಪೇಟೆ, ಮೇ ೨೩: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಆದೇಶದ ಮೇರೆಗೆ ಪೊನ್ನಂಪೇಟೆ ವ್ಯಾಪ್ತಿಯ ವರ್ತಕರಿಗೆ ಹಾಗೂ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಮೂರು ದಿನಗಳ ಅವಧಿಯಲ್ಲಿ ಒಟ್ಟು ೨೮೦ ಜನರ ಗಂಟಲು ಹಾಗೂ ಮೂಗಿನ ದ್ರವ ಸಂಗ್ರಹಿಸಲಾಗಿದೆ. ತಾ. ೨೦ ರಂದು ಪರೀಕ್ಷೆ ನಡೆಸಿದ ೧೦೭ ಜನರಲ್ಲಿ ೧೦೫ ಜನರ ಪರೀಕ್ಷಾ ವರದಿ ನೆಗೆಟಿವ್ ಆಗಿದೆ. ಇಬ್ಬರಿಗೆ ಪಾಸಿಟಿವ್ ಬಂದಿದ್ದು, ಐಸೋಲೇಶನ್‌ನಲ್ಲಿ ಇದ್ದಾರೆ. ಇನ್ನೂ ೧೭೩ ಜನರ ಪರೀಕ್ಷಾ ವರದಿ ಬರಬೇಕಿದೆ. ಆಡಳಿತ ವೈದ್ಯಾಧಿಕಾರಿ ಹೆಚ್.ಎಸ್. ಸುರೇಶ್ ಅವರ ನೇತೃತ್ವದಲ್ಲಿ ಪೊನ್ನಂಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ನಡೆಯಿತು. ಆರೋಗ್ಯ ನಿರೀಕ್ಷಕ ಅವಿನಾಶ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಉಷಾರಾಣಿ, ಆರೋಗ್ಯ ಸಿಬ್ಬಂದಿ ಪಳಂಗಪ್ಪ ಹಾಗೂ ಗಿರೀಶ್, ಆಶಾಕರ್ತೆಯರಾದ ಜನಿತ, ಪ್ರಮೀಳ, ಪೊನ್ನಮ್ಮ, ಪ್ರಶಾಂತಿ ಹಾಗೂ ಭವಾನಿ ಕಾರ್ಯನಿರ್ವಹಿಸಿದರು.