ಮಡಿಕೇರಿ, ಮೇ ೨೦: ಕೊಡಗು ಜಿಲ್ಲೆಯ ಡಿ.ಸಿ.ಸಿ ಬ್ಯಾಂಕಿನ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲಾ ನೌಕರರನ್ನು ‘ಫ್ರಂಟ್ ಲೈನ್ ವಕರ‍್ಸ್’ (ಮುಂಚೂಣಿ ಕಾರ್ಯಕರ್ತರು) ಎಂದು ಘೋಷಿಸಿ ಕೋವಿಡ್ ನಿಯಂತ್ರಿತ ಲಸಿಕೆಯನ್ನು ನೀಡುವಂತೆ ಕೊಡಗು ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ (ಬಾಂಡ್) ಅವರು ಸಹಕಾರ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗೆ ಪತ್ರ ಬರೆದಿದ್ದು, ಈ ಮೂಲಕ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗು ತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕೂಡ ಅತೀ ಹೆಚ್ಚಿದೆ. ಜಿಲ್ಲೆಯಲ್ಲಿ ೭೩ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು ಕೇಂದ್ರ, ರಾಜ್ಯ ಸರಕಾರಗಳ ಆದೇಶದ ಅನ್ವಯ ಸಂಘದ ಸಿಬ್ಬಂದಿಗಳು ಸಾರ್ವಜನಿಕ ಪಡಿತರ ವಿತರಣೆ ಯಲ್ಲಿಯೂ ತೊಡಗಿದ್ದಾರೆ.

ಜಿಲ್ಲೆಯಲ್ಲಿನ ಅನೇಕ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢ ವಾಗಿದ್ದು, ಡಿ.ಸಿ.ಸಿ. ಬ್ಯಾಂಕಿನ ೨ ಶಾಖೆಗಳು ಸೀಲ್‌ಡೌನ್ ಕೂಡ ಆಗಿದೆ. ಈ ಕಾರಣಗಳಿಂದಾಗಿ ಡಿ.ಸಿ.ಸಿ. ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ರಕ್ಷಣೆಗಾಗಿ, ಇವರುಗಳನ್ನು ಮುಂಚೂಣಿ ಕಾರ್ಯಕರ್ತರನ್ನಾಗಿ ಘೋಷಿಸಿ ಆದ್ಯತೆ ಮೇರೆಗೆ ಲಸಿಕೆ ನೀಡ ಬೇಕಾಗಿ ಪತ್ರದ ಮೂಲಕ ಬಾಂಡ್ ಗಣಪತಿ ಅವರು ಒತ್ತಾಯಿಸಿದ್ದಾರೆ.