ಸೋಮವಾರಪೇಟೆ: ಮೊನ್ನೆ ರಾತ್ರಿಯಿಂದ ನಿನ್ನೆಯವರೆಗೂ ಎಡೆಬಿಡದೇ ಸುರಿದ ಮಳೆಯಿಂದ ಇಡೀ ವಾತಾವರಣ ಶೀತಮಯವಾಗಿದ್ದು, ಇಂದು ಮಳೆಯ ಆರ್ಭಟ ತಗ್ಗಿತ್ತು.

ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಎಡೆಬಿಡದೆ ಸುರಿದ ಮಳೆ ಇಂದು ಬೆಳಗ್ಗಿನಿಂದಲೂ ಬಿಡುವು ನೀಡಿತ್ತು. ನಡು ನಡುವೆ ಕೆಲ ನಿಮಿಷಗಳ ಕಾಲ ಸಾಧಾರಣ ಮಳೆಯಾಗಿದ್ದನ್ನು ಹೊರತುಪಡಿಸಿದರೆ ಭಾರೀ ಪ್ರಮಾಣದ ಮಳೆ ಸುರಿಯಲಿಲ್ಲ.

ಮೋಡಮುಸುಕಿದ ವಾತಾವರಣ ಮುಂದುವರೆದಿದ್ದು, ನಿನ್ನೆ ಸುರಿದ ಧಾರಾಕಾರ ಮಳೆಗೆ ಚರಂಡಿಗಳಲ್ಲಿದ್ದ ಕೊಳಚೆ ರಸ್ತೆಯ ಮೇಲೆ ಹರಿಯಿತು. ತೋಟದ ಕೆಲಸ ಕಾರ್ಯಗಳಿಗೆ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಅರೇಬಿಕಾ ಕಾಫಿ ತೋಟದಲ್ಲಿ ಗೊಬ್ಬರ ಹಾಕುವ ಕಾರ್ಯ ಭರದಿಂದ ಸಾಗಿತು.