ಮಡಿಕೇರಿ, ಮೇ 14: ಕೊರೊನಾ ಸೋಂಕು ತೀವ್ರ ಕ್ಲಿಷ್ಟ ಹಾಗೂ ಜಟಿಲತೆಯಿಂದ ಕೂಡಿದ್ದು, ಈ ಸಾಂಕ್ರಾಮಿಕದ ಬಗ್ಗೆ ಪ್ರತಿನಿತ್ಯ ಹೊಸ ಹೊಸ ಸಂಶೋಧನೆಗಳು ಮೂಡಿಬರುತ್ತಿವೆ. ಈ ಸೋಂಕಿನ ಮೊದಲನೆಯ ಅಲೆಯು ಹೆಚ್ಚಾಗಿ ವಯಸ್ಸಾದವರನ್ನು ಕಾಡಿದರೆ, ಎರಡನೆಯ ಅಲೆಯು ಯುವಜನತೆಗೆ ಮಾರಕವಾಗಿದೆ ಎನ್ನಲಾಗಿದೆ. ಇದಲ್ಲದೆ, ಮುಂಬರುವ ಮೂರನೆ ಅಲೆಯು ಮಕ್ಕಳಿಗೆ ಅಪಾಯಕಾರಿಯಾಗಿರುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ. ಮಾನವನ ಜೀವನ ಶೈಲಿಯನ್ನೇ ಬದಲಾಯಿಸಿದ ಈ ಸೋಂಕಿನ ಲಕ್ಷಣಗಳು ಅರ್ಥಮಾಡಿಕೊಳ್ಳಲಾಗದಷ್ಟು ಅಚ್ಚರಿ ತರುತ್ತಿದೆ. ಕೊರೊನಾ ಸೋಂಕಿನ ಅನೇಕ ಲಕ್ಷಣಗಳಲ್ಲಿ, ಎರಡನೆಯ ಅಲೆಯಲ್ಲಿ ಯುವಜನರನ್ನು ಕಾಡುತ್ತಿರುವ ಒಂದು ನಿಗೂಢ ಲಕ್ಷಣವೆಂದರೆ ‘ಹ್ಯಾಪಿ ಹೈಪಾಕ್ಸಿಯ’. ಸಂಶೋಧನೆಗಳು ತಿಳಿಸುವಂತೆ, ಕೊರೊನಾ ಸೋಂಕಿನ ಎರಡನೆಯ ಅಲೆಯಲ್ಲಿ ಶೇಕಡ 30 ರಷ್ಟು ಸೋಂಕಿತರು ಹ್ಯಾಪಿ ಹೈಪಾಕ್ಸಿಯ ಲಕ್ಷಣದಿಂದ ಬಳಲಿ, ವಿಳಂಬಿತ ಚಿಕಿತ್ಸೆಯ ಕಾರಣ ಸೋಂಕಿಗೆ ಬಲಿಯಾಗುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರವನ್ನೇ ಅಚ್ಚರಿ ಪಡಿಸಿರುವ ಹ್ಯಾಪಿ ಹೈಪಾಕ್ಸಿಯ, ಹೆಚ್ಚಾಗಿ ಯುವಜನರನ್ನು ಕಾಡುತ್ತಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ.